ಪ್ರಸನ್ನ ಕುಮಾರ್ ಮರಳಿ ಕಾಂಗ್ರೆಸ್‌ಗೆ? ಅಖಂಡ ಶ್ರೀನಿವಾಸ ಮೂರ್ತಿಗೆ ಆತಂಕ
Team Udayavani, Aug 17, 2020, 10:11 AM IST
ಬೆಂಗಳೂರು: ಡಿ.ಜೆ.ಹಳ್ಳಿ ಪ್ರಕರಣದ ನಡುವೆಯೇ ಪುಲಕೇಶಿ ನಗರದ ಮಾಜಿ ಶಾಸಕ ಪ್ರಸನ್ನಕುಮಾರ್ ಅವರನ್ನು ಕಾಂಗ್ರೆಸ್‌ಗೆ ವಾಪಸ್ ಕರೆ ತರುವ ಪ್ರಯತ್ನಗಳು ನಡೆಯುತ್ತಿವೆ.
ಪ್ರಸನ್ನಕುಮಾರ್ ಮಾಜಿ ಸಚಿವ ದಿ| ಬಸವಲಿಂಗಪ್ಪ ಅವರ ಪುತ್ರರಾಗಿದ್ದು, ಮೂಲ ಕಾಂಗ್ರೆಸ್ಸಿಗರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಂದಿದ್ದ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಪ್ರಸನ್ನಕುಮಾರ್ ಜೆಡಿಎಸ್ ಸೇರಿ 2018ರ ಚುನಾವಣೆಯಲ್ಲಿ ಶ್ರೀನಿವಾಸ್ ವಿರುದ್ಧ ಸೋತಿದ್ದರು. ಅನಂತರ ಪ್ರಸನ್ನಕುಮಾರ್ ಜೆಡಿಎಸ್ ಜತೆಗೂ ಗುರುತಿಸಿಕೊಳ್ಳದೆ ಅಂತರ ಕಾಯ್ದುಕೊಂಡಿದ್ದರು.
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಬಲಗೊಳಿಸಲು ಈ ಹಿಂದೆ ಪಕ್ಷ ತೊರೆದು ಹೋದವರನ್ನು ಮತ್ತೆ ವಾಪಸ್ ಕರೆತರಲು ಉತ್ಸುಕರಾಗಿದ್ದಾರೆ. ಈ ಸಂಬಂಧ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ಈಗಾಗಲೇ ಮಾಜಿ ಶಾಸಕ ಪ್ರಸನ್ನಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಅವರೂ ಪ್ರಸನ್ನಕುಮಾರ್ ಅವರನ್ನು ಸೇರಿಸಿಕೊಳ್ಳಲು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಕ್ಷೇತ್ರದ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆತಂಕಕ್ಕೆ ಕಾರಣವಾಗಿದೆ.
ಮೂಲ ವಲಸಿಗರ ನಡುವಿನ ತಿಕ್ಕಾಟ
ಪುಲಕೇಶಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮೂಲ ಕಾರ್ಯಕರ್ತರು ಹಾಗೂ ವಲಸಿಗರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಿಂದ ರಾಜ್ಯದಲ್ಲಿಯೇ ಅತಿ ಹೆಚ್ಚು 81 ಸಾವಿರ ಮತಗಳ ಅಂತರದಿಂದ ಜಯ ಗಳಿಸಿರುವ ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್‌ನಿಂದ ಬಂದು ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಿರುವುದು ಮೂಲ ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿರಬರುತ್ತಿವೆ. ಇದು ಕ್ಷೇತ್ರದಲ್ಲಿ ನಿರಂತರ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ ಎನ್ನಲಾಗಿದೆ.