ಉಕ್ರೇನ್ ನಲ್ಲಿ ರಷ್ಯಾದ ಟ್ಯಾಂಕ್ ಕಮಾಂಡರ್‌ಗೆ ಜೀವಾವಧಿ ಶಿಕ್ಷೆ
ಉಕ್ರೇನ್ ಆಕ್ರಮಣದ ನಂತರ ನಡೆದ ಮೊದಲ ಯುದ್ಧಾಪರಾಧಗಳ ವಿಚಾರಣೆ
Team Udayavani, May 23, 2022, 4:08 PM IST
ಕೀವ್ : ಉಕ್ರೇನ್ ಆಕ್ರಮಣದ ಆರಂಭದಲ್ಲಿ ನಿರಾಯುಧ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈದಿರುವುದನ್ನು ಒಪ್ಪಿಕೊಂಡ ರಷ್ಯಾದ ಟ್ಯಾಂಕ್ ಕಮಾಂಡರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
21 ವರ್ಷದ ಸಾರ್ಜೆಂಟ್ ವಾಡಿಮ್ ಶಿಶಿಮರಿನ್ ಎಂಬ ರಷ್ಯಾದ ಸೇನಾ ಕಮಾಂಡರ್ ಫೆಬ್ರವರಿ 28 ರಂದು ಈಶಾನ್ಯ ಗ್ರಾಮ ಚುಪಾಖಿವ್ಕಾದಲ್ಲಿ 62 ವರ್ಷದ ಅಲೆಕ್ಸಾಂಡರ್ ಶೆಲಿಕೋವ್ ಅವರನ್ನು ಹತ್ಯೆಗೈದಿದ್ದ. ಈ ಪ್ರಕರಣವು ಉಕ್ರೇನ್ ಆಕ್ರಮಣದ ನಂತರ ನಡೆದ ಮೊದಲ ಯುದ್ಧಾಪರಾಧಗಳ ವಿಚಾರಣೆಯಾಗಿದೆ.
ಶಿಶಿಮರಿನ್ ಮತ್ತು ಇತರ ನಾಲ್ವರು ರಷ್ಯಾದ ಸೈನಿಕರು ಉಕ್ರೇನಿಯನ್ ರಕ್ಷಕರು ಪ್ರತಿದಾಳಿ ನಡೆಸಿದ ನಂತರ ತಪ್ಪಿಸಿಕೊಳ್ಳಲು ಖಾಸಗಿ ಒಡೆತನದ ಕಾರನ್ನು ಕದ್ದಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದು, ಚುಪಾಖಿವ್ಕಾಗೆ ಪಲಾಯನಗೈಯುವ ವೇಳೆ ಶೆಲಿಕೋವ್ ಅವರು ಬೈಸಿಕಲ್ ಸವಾರಿ ಮಾಡುತ್ತಾ ಫೋನ್ ನಲ್ಲಿ ಮಾತನಾಡುತ್ತಾ ಬರುತ್ತಿದ್ದರು. ರಷ್ಯನ್ನರ ಉಪಸ್ಥಿತಿಯ ಬಗ್ಗೆ ವರದಿ ಮಾಡುವುದನ್ನು ತಡೆಯಲು ಅವರನ್ನು ಕೊಲ್ಲಲು ಇನ್ನೊಬ್ಬ ಸೈನಿಕನಿಂದ ಶಿಶಿಮರಿನ್ ಗೆ ಆದೇಶಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಗಳು ಹೇಳಿದ್ದಾರೆ.