ಸಾರಿಗೆ ನಿಗಮದ 36 ಸಾವಿರ ನೌಕರರಿಗೆ 1ನೇ ತಾರೀಕಿನಂದೇ ವೇತನ
Team Udayavani, Oct 1, 2022, 11:12 PM IST
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದ 65 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಹಂತದ ಸುಮಾರು 36 ಸಾವಿರ ಸಿಬಂದಿಗೂ ಪ್ರತಿ ತಿಂಗಳು ಒಂದನೇ ತಾರೀಕಿನಂದು ವೇತನ ಪಾವತಿಗೆ ಆದೇಶ ಹೊರಡಿಸಲಾಗಿದೆ.
ಇದು ಅಕ್ಟೋಬರ್‌ನಿಂದಲೇ ಜಾರಿಗೆ ಬಂದಿದೆ. 1957ರಲ್ಲಿ ಮೈಸೂರು ಸರಕಾರದಿಂದ ರಸ್ತೆ ಸಾರಿಗೆ ಇಲಾಖೆ (ಎಜಿಆರ್‌ಟಿಡಿ) ಅಸ್ತಿತ್ವಕ್ಕೆ ಬಂದ ದಿನದಿಂದ ತಿಂಗಳ 7ನೇ ತಾರೀಕಿಗೆ ಚಾಲಕ, ನಿರ್ವಾಹಕರಿಗೆ, ಮೆಕ್ಯಾನಿಕ್ ಮತ್ತು ತಾಂತ್ರಿಕ ಸಿಬಂದಿಗೆ 4ನೇ ತಾರೀಕಿಗೆ ಮತ್ತು ಆಡಳಿತ ವಿಭಾಗದ ಅಧಿಕಾರಿ-ಸಿಬಂದಿಗೆ ತಿಂಗಳ 1ನೇ ತಾರೀಕಿಗೆ ವೇತನ ಆಗುತ್ತಿತ್ತು.