ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹೊಸ ಸಿಜೆ?
Team Udayavani, Sep 30, 2022, 8:30 PM IST
ಬೆಂಗಳೂರು: ಬಾಂಬೆ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ನೇತೃತ್ವದಲ್ಲಿ ಸೆ.28ರಂದು ನಡೆದ ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಿತುರಾಜ್ ಅವಸ್ಥಿ ಅವರು 2022ರ ಜು.2ರಂದು ನಿವೃತ್ತಿ ಹೊಂದಿದ್ದರು. ಸದ್ಯ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ.
ನ್ಯಾ.ವರಾಲೆ ಅವರು 1985ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. 2008ರ ಜುಲೈ 18ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಕೊಲಿಜಿಯಂ ಶಿಫಾರಸು ಒಪ್ಪಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದರೆ ನ್ಯಾ. ವರಾಲೆ ಕರ್ನಾಟಕ ಹೈಕೋರ್ಟ್ನ 32ನೇ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ.