ಸಂಕೇಶ್ವರದ ಮಹಿಳೆಯ ಹತ್ಯೆ ಕೇಸ್ ನ ಕೆಲ ಸುಳಿವು ಪತ್ತೆ: ಎಸ್.ಪಿ ನಿಂಬರಗಿ
Team Udayavani, Jan 17, 2022, 4:30 PM IST
ಸಂಕೇಶ್ವರ : ಮನೆಯಲ್ಲಿದ್ದ ಒಬ್ಬಂಟಿ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆರೋಪಿಗಳ ಬಗ್ಗೆ ಕೆಲವು ಸುಳಿವು ಪತ್ತೆಯಾಗಿದ್ದು, ಶೀಘ್ರವಾಗಿ ಅವರನ್ನು ಬಂಧಿಸಲಾಗುವುದು, ಬಗ್ಗೆ ಯಾವ ನಾಗರಿಕರು ಆತಂಕ ಪಡುವ ಅವಶಕತೆ ಇಲ್ಲ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಹೇಳಿದ್ದಾರೆ.
ನಗರದಲ್ಲಿ ಒಂಟಿ ಮಹಿಳೆ ಶೈಲಜಾ ಸುಭೇದಾರ ಅವರ ಮನೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಲಾದ ಸ್ಥಳಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ, ಒಬ್ಬಂಟಿ ಮಹಿಳೆಯ ಗುಂಡಿಕ್ಕಿ ಹತ್ಯೆ ಮಾಡಿರುವ ಆರೋಪಿತರ ಪತ್ತೆಗಾಗಿ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆಳಚ್ಚು ತಜ್ಞರ ತಂಡವು ಶೋಧ ಕಾರ್ಯ ಮಾಡುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಕೂಡಾ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ ನೇತೃತ್ವದಲ್ಲಿ ತಂಡ ಒಂದನ್ನು ರಚನೆ ಮಾಡಲಾಗಿದೆ. ಅಲ್ಲದೆ ಆರೋಪಿತರ ಕುರಿತು ಕೆಲವು ಮಾಹಿತಿಗಳು ದೊರೆತಿದ್ದು, ಈ ಕೊಲೆ ಯಾರು ಯಾವ ಕಾರಣಕ್ಕಾಗಿ ಮಾಡಿದ್ದಾರೆ ಎನ್ನುವ ಕುರಿತು ನಮ್ಮ ಪೊಲೀಸರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎಂದರು.
ಕೊಲೆಯಾಗಿರುವ ಮಹಿಳೆಯ ಶವ ಪರೀಕ್ಷೆ ಇಂದು ನಡೆಸಲಾಗುತ್ತಿದ್ದು, ಮಹಿಳೆಯ ದೇಹದಲ್ಲಿ ಹೊಕ್ಕಿರುವ ಗುಂಡು ದೇಹದಲ್ಲಿ ಇರಬಹುದು ಎಂದು ಶಂಕಿಸಲಾಗಿದೆ. ಅದನ್ನು ಹೊರತೆಗೆದು ತನಿಖೆ ನಡೆಸಲಾಗುತ್ತದೆ. ಹತ್ಯೆ ಮಾಡಲಾಗಿರುವ ಮಹಿಳೆಗೆ ಮೂರು ಗುಂಡುಗಳು ತಾಗಿವೆ. ಆ ಗುಂಡಿನ ದಾಳಿಯಿಂದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಬಹುದು ಎಂದು ಅಂದಾಜಿಸಲಾಗಿದೆ. ಆ ಗುಂಡುಗಳು ಎಲ್ಲಿವು ಇವೆ ಎನ್ನುವದರ ಕುರಿತು ತನಿಖೆ ನಡೆಸಲಾಗುತ್ತದೆ. ಹತ್ಯೆಯ ಕುರಿತು ನಮಗೆ ಕೆಲವು ಸುಳಿವುಗಳು ದೊರೆತಿವೆ. ಅವುಗಳ ಕುರಿತು ತೀವ್ರ ತನಿಖೆ ನಡೆಸಲಾಗುತ್ತಿದೆ. ಮುಂಬರುವ ಎರಡು ಅಥವಾ ಮೂರು ದಿನಗಳಲ್ಲಿ ಈ ಪ್ರಕರಣವನ್ನು ಭೇದಿಸಲಾಗುವದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಪಿಐ ರಮೇಶ ಛಾಯಾಗೋಳ, ಪಿಎಸ್.ಐ ಗಣಪತಿ ಕೊಂಗನೊಳಿ ಉಪಸ್ಥಿತರಿದ್ದರು.