ಆರು ತಿಂಗಳು ಕಾಲಾವಕಾಶ ಕೇಳಿದ ಸರಕಾರ; ತಾಪಂ, ಜಿಪಂ: ಕ್ಷೇತ್ರ ಮರುವಿಂಗಡಣೆ, ಮೀಸಲಾತಿ ನಿಗದಿ
Team Udayavani, Sep 27, 2022, 7:35 AM IST
ಬೆಂಗಳೂರು: ರಾಜ್ಯದ ತಾ.ಪಂ.-ಜಿ.ಪಂ. ಕ್ಷೇತ್ರಗಳ ನಿಗದಿ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ಆರು ತಿಂಗಳು ಕಾಲಾವಕಾಶ ಕೇಳಿದೆ.
ನಿಗದಿತ ಅವಧಿಯಲ್ಲಿ ತಾ.ಪಂ. ಮತ್ತು ಜಿ.ಪಂ.ಗಳಿಗೆ ಚುನಾವಣೆ ನಡೆಸುವ ಬಗ್ಗೆ ಹಾಗೂ ಸೀಮಾ ನಿರ್ಣಯ ಆಯೋಗವನ್ನು ರಚಿಸಿರುವುದನ್ನು ಆಕ್ಷೇಪಿಸಿ ರಾಜ್ಯ ಚುನಾವಣ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮು| ನ್ಯಾ| ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ನೀಡಿರುವ ಅಫಿದವಿತ್ ಅನ್ನು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.
ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳ ಸಂಖ್ಯೆ ಹಾಗೂ ಜನಸಂಖ್ಯೆ ನಿಗದಿಗೆ ಸಂಬಂಧಿಸಿ “ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ’ಗೆ ತಿದ್ದುಪಡಿ ತಂದಿರುವುದರಿಂದ ಕ್ಷೇತ್ರಗಳ ಮರುವಿಂಗಡಣೆಗೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ.
ಆದ್ದರಿಂದ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸುವಂತೆ ಸೀಮಾ ನಿರ್ಣಯ ಆಯೋಗ ಮನವಿ ಮಾಡಿದೆ. ಅದರ ಬಳಿಕ ಮೀಸಲಾತಿ ನಿಗದಿಪಡಿಸಲು ಸರಕಾರಕ್ಕೆ ಮೂರು ತಿಂಗಳು ಬೇಕಾಗಬಹುದು. ಒಟ್ಟಾರೆ 6 ತಿಂಗಳು ಕಾಲಾವಕಾಶ ಬೇಕು ಎಂದು ಪ್ರಮಾಣಪತ್ರದಲ್ಲಿ ಮನವಿ ಮಾಡಲಾಗಿದೆ.
ಅವಧಿ ವಿಸ್ತರಣೆಗೆ ಮಧ್ಯಾಂತರ ಅರ್ಜಿ
ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಮರುವಿಗಂಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆಯನ್ನು 12 ವಾರಗಳ ಒಳಗೆ ಪೂರ್ಣಗೊಳಿಸುವಂತೆ ಮೇ 24ರಂದು ನ್ಯಾಯಾಲಯ ಸರಕಾರಕ್ಕೆ ನಿರ್ದೇಶಿಸಿತ್ತು. ಈಗ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತೆ 3 ತಿಂಗಳು ಕಾಲಾವಕಾಶ ಕೋರಿ ಸೀಮಾ ನಿರ್ಣಯ ಆಯೋಗ ಸರಕಾರಕ್ಕೆ ಸೆ.19ರಂದು ಪತ್ರ ಬರೆದಿದೆ.
ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲು ಸರಕಾರ ಪ್ರಯತ್ನಿಸುತ್ತಿದ್ದು, 12 ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿ ಮಧ್ಯಾಂತರ ಅರ್ಜಿ ಸಲ್ಲಿಸಿದರು.
ಅದನ್ನು ಪರಿಗಣಿಸಿದ ಪೀಠ, 12 ವಾರಗಳಲ್ಲಿ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿ ಮೇ 24ರಂದು ಹೊರಡಿಸಿದ್ದ ಆದೇಶ ಮಾರ್ಪಡಿಸಿ ಕ್ಷೇತ್ರಗಳ ನಿಗದಿ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು 12 ವಾರ ಕಾಲಾವಕಾಶ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.21ರಂದು ಬಳ್ಳಾರಿಗೆ: ಸಚಿವ ಶ್ರೀರಾಮುಲು
ಗುಲಾಮಿ ಮನಸ್ಥಿತಿ ತೊಡೆದು ಹಾಕಲು ಎನ್ಇಪಿ ಸಹಾಯಕ: ಹೊಸಬಾಳೆ
ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಪರಿಶೀಲನ ಸಮಿತಿ