ನಮ್ಮ ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದರೆ ಕ್ರಾಂತಿ ರೂಪ ಪಡೆಯಲಿದೆ : ಕಾಶಪ್ಪನವರ್
Team Udayavani, Jan 20, 2021, 5:27 PM IST
ಕೊಪ್ಪಳ: ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರ್ಪಡೆಗೆ ಒತ್ತಾಯಿಸಿ ನಡೆದಿರುವ ಪಾದಯಾತ್ರೆಯು 7 ದಿನದ ವರೆಗೂ ಶಾಂತಿಯುತವಾಗಿ ನಡೆದಿದೆ. ಸರ್ಕಾರ ಸ್ಪಂದನೆ ಮಾಡದಿದ್ದರೆ ಬೆಂಗಳೂರು ತಲುಪುವುದರ ಒಳಗೆ ಕಾಂತ್ರಿ ರೂಪ ಪಡೆಯಲಿದೆ. ಅದಕ್ಕೂ ಮುನ್ನಾ ಸರ್ಕಾರವು ಎಚ್ಚೆತ್ತುಕೊಳ್ಳಬೇಕೆಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2ಎ ಮೀಸಲಾತಿಗಾಗಿ ಶ್ರೀಗಳ ನೇತೃತ್ವದಲ್ಲಿ ಮೂರು ಹಂತದಲ್ಲಿ ಹೋರಾಟ ನಡೆದಿದೆ. ಪಾದಯಾತ್ರೆ ಅಂತಿಮ ಹೋರಾಟವಾಗಿದೆ. ನಾವು ಜೀವವನ್ನಾದ್ರೂ ಕೊಡುತ್ತೇವೆ. ಮೀಸಲಾತಿ ಪಡೆಯದೇ ಬಿಡುವುದಿಲ್ಲ ಎನ್ನುವುದು ನಮ್ಮ ಸ್ಪಷ್ಟ ನಿಲುವಾಗಿದೆ. ಇಂದು ಶಾಂತಿಯುತವಾಗಿ ಪಾದಯಾತ್ರೆಯು ನಡೆಯುತ್ತಿದೆ. ಈ ಯಾತ್ರೆ ಬೆಂಗಳೂರು ತಲುಪುವುದರ ಒಳಗಾಗಿ ಸರ್ಕಾರ ಮೀಸಲಾತಿ ಘೋಷಣೆ ಮಾಡದಿದ್ದರೆ ಯಾತ್ರೆ ಕ್ರಾಂತಿರೂಪ ಪಡೆದುಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ನಾವು ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಕೇಳುತ್ತಿದ್ದೇವೆ ಎಂದರು.
ಇದನ್ನೂ ಓದಿ:ಪಂಚವಾರ್ಷಿಕ ಯೋಜನೆಯಾಯ್ತು ಈಜುಕೊಳ : ಕುಂಟುತ್ತಲೇ ಸಾಗಿರುವ ಕಾಮಗಾರಿ
ಡಿಸಿಎಂ ಗೋವಿಂದ ಕಾರಜೋಳ ಅವರು ನಮ್ಮ ಯಾತ್ರೆಯ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರಿಗೆ ಈಗಾಗಲೆ ಮೀಸಲಾತಿ ಸಿಕ್ಕಿದೆ. ನಮಗೆ ಮೀಸಲಾತಿ ಬೇಕಾಗಿರುವುದರಿಂದ ನಾವು ಯಾತ್ರೆ ಆರಂಭಿಸಿದ್ದೇವೆ. ಅದಕ್ಕೆ ಅವರು ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ. ಕಾರಜೋಳ ಅವರು ಗೆಲ್ಲಲು ಪಂಚಮಸಾಲಿ ಸಮಾಜದ ಪಾಲು ಬಹುದೊಡ್ಡದಿದೆ. ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದೆ ಎಂದರೆ ಪಂಚಮಸಾಲಿ ಸಮಾಜ ೧೫ ಶಾಸಕರನ್ನ ಕೊಟ್ಟಿದೆ. ಸಿಎಂ ನಮ್ಮ ಸಮಾಜದ ಕೊಡುಗೆಯನ್ನು ನೆನಪಿಸಿಕೊಳ್ಳಬೇಕು. ಮೀಸಲಾತಿ ಕೊಡದೇ ಹೋದರೆ ನಾವು ಬಿಡುವುದಿಲ್ಲ. ಜೀವವನ್ನೆ ಕೊಟ್ಟೇವೂ ಮೀಸಲಾತಿ ಬಿಡಲ್ಲ ಎಂದರು.