“ವೀಸಾ ನೀಡದಿದ್ದರೆ ಟಿ20 ಸ್ಥಳಾಂತರಿಸಿ’ : ಎಹಸಾನ್ ಮಣಿ
Team Udayavani, Feb 23, 2021, 12:55 AM IST
ಕರಾಚಿ: ಈ ವರ್ಷ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಲಿರುವ ಭಾರತವು ಪಾಕಿಸ್ಥಾನ ಕ್ರಿಕೆಟ್ ತಂಡಕ್ಕೆ, ಅಭಿಮಾನಿಗಳಿಗೆ ಮತ್ತು ಪತ್ರಕರ್ತರಿಗೆ ವೀಸಾ ನೀಡುವು ದಾಗಿ ಲಿಖೀತ ಭರವಸೆ ನೀಡಬೇಕು. ಇಲ್ಲದಿದ್ದರೆ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಬೇಕು ಎಂದು ಪಾಕಿಸ್ಥಾನ ಕ್ರಿಕಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಆಗ್ರಹಿಸಿದ್ದಾರೆ.
ಲಿಖೀತ ಭರವಸೆ ಅಗತ್ಯ
“ಬಿಗ್ ತ್ರೀ ಎನ್ನುವ ಮನೋಭಾವ ಕೊನೆಗೊಳ್ಳಬೇಕು. ಎಲ್ಲರಿಗೂ ಸಮಾನ ವೇದಿಕೆ ಲಭಿಸಬೇಕು. ನಮ್ಮ ಸರಕಾರ ಭಾರತದಲ್ಲಿ ಕ್ರಿಕೆಟ್ ಆಡಬಾರದು ಎಂದೇನೂ ಸೂಚಿಸಿಲ್ಲ. ಐಸಿಸಿಯ ನಿರ್ಧಾರಕ್ಕೆ ನಾವು ಒಪ್ಪಿದ್ದೇವೆ. ಇದನ್ನು ವಿರೋಧಿಸಲು ಸಾಧ್ಯವಿಲ್ಲ.
ನಮ್ಮ ತಂಡಕ್ಕೆ ವೀಸಾ ಭರವಸೆ ಕೊಟ್ಟರೆ ಸಾಲದು. ಇಲ್ಲಿಂದ ಪ್ರಯಾಣಿಸುವ ಅಭಿಮಾನಿಗಳು ಮತ್ತು ಕ್ರೀಡಾ ಪತ್ರಕರ್ತರಿಗೂ ವೀಸಾ ನೀಡುವ ಲಿಖೀತ ಭರವಸೆ ನೀಡಬೇಕು. ಈ ಕುರಿತು ಐಸಿಸಿಗೆ ಪತ್ರ ಬರೆದಿದ್ದೇವೆ. ಮಾರ್ಚ್ ಅಂತ್ಯದೊಳಗೆ ವೀಸಾ ನೀಡದಿದ್ದರೆ ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಬೇಕು’ ಎಂದಿದ್ದಾರೆ ಎಹಸಾನ್ ಮಣಿ.