ಹಾಡ ಹಗಲೇ ಜ್ಯುವೆಲರಿ ಅಂಗಡಿ ಮಾಲೀಕನ ಮನೆ ದರೋಡೆ ಯತ್ನ: ಮಹಿಳೆ ಪೊಲೀಸ್ ವಶಕ್ಕೆ
Team Udayavani, Jan 29, 2022, 2:38 PM IST
ಮುದ್ದೇಬಿಹಾಳ: ಆಂಧ್ರ ಮೂಲದ 4-5 ಮಹಿಳೆಯರ ತಂಡ ಹಾಡ ಹಗಲೇ ಜ್ಯುವೆಲರಿ ಅಂಗಡಿ ಮಾಲೀಕನ ಮನೆ ದರೋಡೆಗೆ ಯತ್ನಿಸಿ ವಿಫಲವಾದ ಘಟನೆ ಶನಿವಾರ ಮಧ್ಯಾಹ್ನ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ನಡೆದಿದೆ.
ಸಂಶಯದ ಮೇಲೆ ಸಾರ್ವಜನಿಕರೆ ಓರ್ವ ಮಹಿಳೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಂಗಡಿ ಮಾಲೀಕ ರವಿ ಬಡಿಗೇರ ಎನ್ನುವವರ ಮನೆಯಲ್ಲಿ ದರೋಡೆ ಯತ್ನ ನಡೆದಿದ್ದು, ಟ್ರೇಜರಿ ಸಪ್ಪಳ ಆದಾಗ ಸಂಶಯಗೊಂಡು ಹೊರಗೆ ಬಂದು ನೋಡಿದಾಗ ದರೋಡೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬಡಿಗೇರ ಅವರ ಪತ್ನಿ ಚಿರಾಡತೊಡಗಿದಾಗ ಆಕೆಯ ಮುಖಕ್ಕೆ ಯಾವುದೋ ಪುಡಿ ಹಾಕಿದಾಗ ಚೀರಾಟ ನಿಲ್ಲಿಸಿದ್ದಾರೆ. ಆದರೂ ಧೈರ್ಯದಿಂದ ಬಡಿಗೇರ ಅವರ ಪತ್ನಿ ಕುಡುಗೋಲು ಹಿಡಿದು ಬಂದಾಗ ಚಿನ್ನದ ಆಭರಣ, ನಗದು ಹಣವನ್ನು ಅಲ್ಲೇ ಚಲ್ಲಾಪಿಲ್ಲಿಯಾಗಿ ಎಸೆದು ಮಹಿಳೆಯರು ಓಡಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಸಾರ್ವಜನಿಕರಿಂದ ಬಂಧಿಸಲ್ಪಟ್ಟ ಮಹಿಳೆ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರು ಇದುವರೆಗೂ ಸ್ಥಳ ಪಂಚನಾಮೆ ನಡೆಸಿಲ್ಲವಾದ್ದರಿಂದ ಚಿನ್ನದ ಆಭರಣ, ನಗದು ಹಣ ಅಂಗಡಿಯಲ್ಲೇ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಯಾರಿಗೂ ಅಲ್ಲಿ ಹೋಗಲು ಅವಕಾಶ ಕೊಟ್ಟಿಲ್ಲ. ಹೀಗಾಗಿ ಆಭರಣ ದರೋಡೆ ಆಗಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.