ಪಕ್ಷದ ನಾಯಕರ ಉದ್ಧಟತನ ಸಹಿಸಿಕೊಳ್ಳಲು ಸಾಧ್ಯವಿಲ್ಲ: ಕೃಷ್ಣಭೈರೇಗೌಡ
Team Udayavani, Jun 19, 2019, 7:04 PM IST
ಶಿವಮೊಗ್ಗ: ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಉದ್ಧಟತನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರೋಷನ್ ಬೇಗ್ ಒಬ್ಬ ಅವಕಾಶವಾದಿ ರಾಜಕಾರಣಿ. ಅವರ ಆರೋಪಗಳು ನಿರಾಧಾರವಾಗಿದೆ. ಬೇಗ್ ಅವರ ಅಮಾನತು ಸರಿಯಾದ ಕ್ರಮ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸಮರ್ಥಿಸಿಕೊಂಡಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇಗ್ ಅವರನ್ನು ಮಂತ್ರಿ ಮಾಡಿದ್ರೆ ಎಲ್ಲವೂ ಸರಿ ಇರುತ್ತಿತ್ತು. ಮಂತ್ರಿ ಮಾಡದೇ ಇರುವುದರಿಂದ ಬೇಗ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.
ಭಿನ್ನಾಭಿಪ್ರಾಯಗಳು ಸಹಜ, ಅವುಗಳನ್ನು ಪಕ್ಷದೊಳಗೆ ಸರಿಪಡಿಸಿಕೊಳ್ಳಬೇಕು. ಬೀದಿಯಲ್ಲಿ ನಿಂತು ಮಾತನಾಡುವುದಲ್ಲ. ಹೀಗಾಗಿ ಬೇಗ್ ವಿರುದ್ಧದ ಶಿಸ್ತುಕ್ರಮ ಸರಿಯಾಗಿದೆ. ಅವರು ಏನೇ ವಿವರಣೆ ಕೊಡುವುದಿದ್ದರೆ ಪಕ್ಷದ ಶಿಸ್ತು ಸಮಿತಿ ಮುಂದೆ ಹೇಳಲಿ ಎಂದು ತಿಳಿಸಿದರು.