ಅಡಿಕೆ ಕೃಷಿಕರಿಗೆ 2 ಕೋ.ರೂ. ವಿಶೇಷ ಪ್ಯಾಕೇಜ್ ಶೀಘ್ರ
Team Udayavani, Dec 1, 2018, 2:05 AM IST
ಕಾಸರಗೋಡು: ಮಹಾಳಿ ಮೊದಲಾದ ಮಾರಕ ರೋಗಗಳ ಪರಿಣಾಮವಾಗಿ ಉತ್ಪಾದನೆ ಕುಸಿತದಿಂದಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಕಾಸರಗೋಡು ಜಿಲ್ಲೆಯ ಅಡಿಕೆ ಕೃಷಿಕರನ್ನು ಸಂರಕ್ಷಿಸಲು 2 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಪರಿಗಣನೆಯಲ್ಲಿದೆ ಎಂದು ಕೃಷಿ ಸಚಿವ ವಿ.ಎಸ್. ಸುನಿಲ್ ಕುಮಾರ್ ಹೇಳಿದ್ದಾರೆ. ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸಚಿವರು ಮಾತನಾಡಿ ಈ ಬಗ್ಗೆ ಭರವಸೆ ನೀಡಿದ್ದಾರೆ. ಅಡಿಕೆ ಕೃಷಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕ ಕೆ. ಕುಂಞಿರಾಮನ್ ಮಂಡಿಸಿದ ಗೊತ್ತುವಳಿ ಸಂದರ್ಭದಲ್ಲಿ ಸಚಿವರು ಉತ್ತರಿಸುತ್ತಾ ಅಡಿಕೆ ಕೃಷಿಕರಿಗೆ ವಿಶೇಷ ಪ್ಯಾಕೇಜ್ ಬಗ್ಗೆ ಭರವಸೆ ನೀಡಿದ್ದಾರೆ.
ಅಡಿಕೆ ಕೃಷಿಗೆ ಬಾಧಿಸುವ ವಿವಿಧ ರೋಗಗಳನ್ನು ನಿಯಂತ್ರಿಸಲು ಅಗತ್ಯವಾದ ಸಹಾಯಧನ ಸಹಿತ ಯೋಜನೆಯಾಗಿದೆ. ಹಣಕಾಸು ಸಂಬಂಧವಾದ ವಿವರಗಳ ಖಾತೆಯ 2016-2017ನೇ ವರ್ಷದ ಅಂಕಿ- ಅಂಶದಂತೆ ಕಾಸರಗೋಡು ಜಿಲ್ಲೆಯಲ್ಲಿ 19,478 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕೃಷಿ, ಮೃಗಸಂರಕ್ಷಣೆ, ಮೀನುಗಾರಿಕೆ ಸಂಬಂಧವಾಗಿ ವಿಧಾನಸಭಾ ಉಪ ಸಮಿತಿ 2017-18ರ ವಿತ್ತ ಪರಿಸ್ಥಿತಿಯನ್ನು ಪರಿಶೋಧಿಸಿದ ಬಳಿಕ ಅಡಿಕೆ ಕೃಷಿಕರಿಗೆ ‘ಅರೆಕಾನಟ್ ಪ್ಯಾಕೇಜ್’ ಎಂಬ ಹೆಸರಿನಲ್ಲಿ 10 ಕೋಟಿ ರೂ.ಯ ವಿಶೇಷ ಪ್ಯಾಕೇಜ್‌ನ್ನು 2019-2010ನೇ ವರ್ಷದ ಮುಂಗಡಪತ್ರದಲ್ಲಿ ಸೇರ್ಪಡೆಗೊಳಿಸಲು ನಿರ್ದೇಶಿಸಿತ್ತು. ಈ ಶಿಫಾರಸು ಮತ್ತು ಅಡಿಕೆ ಕೃಷಿಕರ ನಿರಂತರ ಬೇಡಿಕೆಯನ್ನು ಪರಿಗಣಿಸಿ ರಾಜ್ಯ ಯೋಜನಾ ಮಂಡಳಿಗೆ ಕೃಷಿ ಇಲಾಖೆ ಸಲ್ಲಿಸಿದ 2019-20ನೇ ಕರಡು ವಾರ್ಷಿಕ ಯೋಜನೆಯಲ್ಲಿ ಸೇರ್ಪಡೆ ಗೊಳಿಸಿ ‘ಅರೆಕಾನಟ್ ಪ್ಯಾಕೇಜ್’ ಗೆ ನಿರ್ದೇಶಿಸಲಾಗಿದೆ ಎಂದು ಸಚಿವ ವಿ.ಎಸ್. ಸುನಿಲ್ ಕುಮಾರ್ ಹೇಳಿದರು.