ಕುಂಬಳೆ: ಅಂಗವಿಕಲ ಬಾಲಕಿಗೆ ಲೈಂಗಿಕ ಕಿರುಕುಳ;ತ್ರಿವಳಿ ಜೀವಾವಧಿ ಶಿಕ್ಷೆ
Team Udayavani, Dec 1, 2022, 5:50 PM IST
ಕುಂಬಳೆ: ಅಂಗವಿಕಲ ಬಾಲಕಿಯ ಕೈಕಾಲು ಕಟ್ಟಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಪೋಕ್ಸೋ ಕಾಯಿದೆಯಡಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತ್ರಿವಳಿ ಜೀವಾವಧಿ ಶಿಕ್ಷೆ ಮತ್ತು 10 ವರ್ಷದ ಕಠಿನ ಸಜೆ ಮತ್ತು 4 ಲಕ್ಷ ರೂ. ದಂಡ ವಿಧಿಸಿದೆ.
ಉಪ್ಪಳ ಮಣಿಮುಂಡ ಶಾರದಾ ನಗರದ ಸುರೇಶ್ ಯಾನೆ ಚೆರಿಯಂಬು (42) ಶಿಕ್ಷೆಗೊಳಗಾದವ. ಈತನು 2015 ಸೆ.22 ರಂದು ಕಿವುಡಿ ಮತ್ತು ಮೂಗಿಯಾಗಿರುವ ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದಾಗ ಹೋಗಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈತ ಈ ಹಿಂದೆಯೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು.
ಅಂದಿನ ಮಂಜೇಶ್ವರ ಎಸ್‌ಐಯಾಗಿದ್ದ ಪಿ. ಪ್ರಮೋದ್, ಬಳಿಕ ಡಿವೈಎಸ್‌ಪಿ ಟಿ. ಪಿ. ಪ್ರೇಮರಾಜನ್, ಕುಂಬಳೆ ಎಸ್‌ಐ ಕೆ. ಪಿ. ಸುರೇಶ್ ಬಾಬು ಅವರ ತಂಡ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿತ್ತು.