ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ: ರೈ
Team Udayavani, Dec 1, 2017, 9:29 AM IST
ಮಂಗಳೂರು: ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ನಿಲ್ಲಿಸಲು ಆದ್ಯತೆ ನೀಡಬೇಕು. ಇದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಳ ಮಾಡಿ ಸರ್ವಋತುಗಳಲ್ಲಿಯೂ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನಿರ್ದೇಶ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ತ್ರೆçಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನೀರು ನಿಲುಗಡೆ ಮತ್ತು ಜಿಲ್ಲೆಯ ರೈತರಿಗೆ ನೀರಿನ ಅನುಕೂಲ ಕಲ್ಪಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶ. ಯೋಜನೆಯಡಿಯಲ್ಲಿ 10 ಕೋಟಿ ರೂ. ವೆಚ್ಚವನ್ನು ಮೀರುವ ಬೃಹತ್ ಅಣೆಕಟ್ಟುಗಳಿಗೆ ಡಿಪಿಆರ್ ಸಿದ್ಧಪಡಿಸುವುದು ಬೇಡ. ಸುಮಾರು 121 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಜಿಲ್ಲೆಗೆ 38 ಕೋಟಿ ರೂ. ಮೀಸಲಿಡಲಾಗಿದೆ. ಅನುದಾನ ಹೆಚ್ಚಳಕ್ಕೆ ಮುಂದಿನ ಸಂಪುಟದಲ್ಲಿ ಪ್ರಸ್ತಾವಿಸಲಾಗುವುದು ಎಂದು ಅವರು ತಿಳಿಸಿದರು.
ಬೃಹತ್ ಅಣೆಕಟ್ಟುಗಳನ್ನು ಕಟ್ಟಿದರೆ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಮುಳುಗಡೆ ಆಗುವುದರೊಂದಿಗೆ ಜಮೀನು ಕಳೆದುಕೊಂಡವರಿಗೆ ಪರಿಹಾರ ಧನವನ್ನು ವಿತರಿಸಬೇಕಾಗುತ್ತದೆ. ಇದು ಅಂತರ್ಜಲ ವೃದ್ಧಿಗಾಗಿ ಕೈಗೊಳ್ಳುತ್ತಿರುವ ಯೋಜನೆಯಾದ್ದರಿಂದ ಬೃಹತ್ ಗಾತ್ರದ ಅಣೆಕಟ್ಟುಗಳ ಅವಶ್ಯವಿರುವುದಿಲ್ಲ. ಕನಿಷ್ಠ 20 ಚಿಕ್ಕ ಚಿಕ್ಕ ಅಣೆಕಟ್ಟುಗಳ ರಚನೆಗೆ ಡಿಪಿಆರ್ ತಯಾರಿಸಬೇಕು ಎಂದವರು ಸೂಚಿಸಿದರು.
ತಾಂತ್ರಿಕ ತೊಂದರೆ ಹಾಗೂ ಮರಳಿನ ಕೊರತೆಯಿಂದಾಗಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ವಹಿಸಿಕೊಂಡ ಬಳಿಕ, ಕಾರಣ ಹೇಳುವುದು ಸರಿಯಲ್ಲ. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಸಹಕರಿಸಬೇಕು ಎಂದು ಸೂಚಿಸಿದರು.
ವಿದ್ಯಾಸಿರಿಗೆ 5.60 ಕೋಟಿ ರೂ.
ವಿದ್ಯಾಸಿರಿ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬಿಡುಗಡೆಗೊಂಡಿರುವ ಮೊತ್ತದ ವಿವರವನ್ನು ಸಚಿವರು ಕೇಳಿದರು. ಇದಕ್ಕೆ ಉತ್ತರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ, 2016-17ನೇ ಸಾಲಿನಲ್ಲಿ ವಿದ್ಯಾಸಿರಿ ಯೋಜನೆಯಡಿ ಸುಮಾರು 5.60 ಕೋಟಿ ರೂ. ಬಿಡುಗಡೆಗೊಂಡಿದ್ದು, 8,774 ಮಂದಿ ವಿದ್ಯಾರ್ಥಿಗಳಿಗೆ ಮೊತ್ತವನ್ನು ವಿತರಿಸಲಾಗಿದೆ ಎಂದರು.
ಶಾಸಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳ ಕೊರತೆ ಜಿಲ್ಲೆಯಲ್ಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹೊಸ ವಸತಿ ನಿಲಯಗಳ ಸ್ಥಾಪನೆ ಸಂಬಂಧ ಅಧಿಕಾರಿಗಳು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿಕೊಟ್ಟಲು ವಿದ್ಯಾರ್ಥಿಗಳ ದೃಷ್ಟಿಯಿಂದ ಉಪಯೋಗವಾಗಬಹುದು ಎಂದರು.
ಜಿಲ್ಲೆಯ ವಸತಿ ಯೋಜನೆಗಳ ಸಮಗ್ರ ಮಾಹಿತಿ ಕೈಪಿಡಿಯನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ ಸಿಇಒ ಡಾ| ಎಂ. ಆರ್. ರವಿ, ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು.
ರಸ್ತೆ ಕಡೆಗೆ ಗಮನ ಹರಿಸಿ
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸ್ಥಿತಿ ಶೋಚನೀಯವಾಗಿದೆ. ಹೆದ್ದಾರಿಗಳಲ್ಲೇ ಅಲ್ಲಲ್ಲಿ ರಸ್ತೆಗುಂಡಿಗಳಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಗಮನ ಸೆಳೆದರು. ಈ ನಿಟ್ಟಿನಲ್ಲಿ ತುರ್ತು ಗಮನ ಹರಿಸಬೇಕು ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರತ್ಯೇಕ ಮರಳು ಬ್ಲಾಕ್
ಸರಕಾರಿ ವಸತಿ ಯೋಜನೆಗಳು ಮತ್ತು ಸರಕಾರಿ ಕಾಮಗಾರಿಗಳಿಗೆ ಮರಳು ಸಿಗುವಂತಾಗಲು ನಾನ್-ಸಿಆರ್‌ಝಡ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಮರಳು ಬ್ಲಾಕ್ ಮಾಡಲಾಗುವುದು ಎಂದು ಸಚಿವ ರಮಾನಾಥ ರೈ ತಿಳಿಸಿದರು. ಸಾರ್ವಜನಿಕರಿಗೆ ನೇರ ಮರಳು ಸಿಗುವಂತಾಗಲು ಪ್ರತೀ ತಾಲೂಕಿನಲ್ಲಿ ಮರಳು ಯಾರ್ಡ್ ಸ್ಥಾಪನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ತಿಳಿಸಿದರು.