ಅವಧಿಗೆ ಮುನ್ನವೇ ದಡ ಸೇರಿವೆ ಮೀನುಗಾರಿಕೆ ಬೋಟ್‌ಗಳು!
ಶೇ.70ರಷ್ಟು ಬೋಟ್‌ಗಳು ಈಗಾಗಲೇ ಲಂಗರು
Team Udayavani, May 7, 2022, 10:43 AM IST
ಬಂದರು: ಮೀನುಗಾರಿಕೆ ಋತು ಕೊನೆ ಗೊಳ್ಳಲು ಇನ್ನೂ 24 ದಿನ ಬಾಕಿ ಇದ್ದರೂ ಅವಧಿಗೂ ಮುನ್ನವೇ ಬೋಟ್‌ಗಳು ದಡ ಸೇರುತ್ತಿದ್ದು ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಶೇ.70ರಷ್ಟು ಬೋಟ್‌ಗಳು ಈಗಾಗಲೇ ಲಂಗರು ಹಾಕಿವೆ!
ಕಳೆದ ಆಗಸ್ಟ್‌ನಲ್ಲಿ ಆರಂಭಗೊಂಡ ಮೀನುಗಾರಿಕೆ ಋತು ಜನವರಿವರೆಗೂ ಉತ್ತಮ ಮೀನುಗಾರಿಕೆಯ ಮೂಲಕ ಆಶಾಭಾವ ಮೂಡಿಸಿತ್ತು. ಉತ್ತಮ ಮೀನು ಸಂಪತ್ತು ದೊರೆತು ಮೀನುಗಾರರಲ್ಲಿ ಮಂದಹಾಸ ಮೂಡಿತ್ತು. ಆದರೆ ಜನವರಿ ಬಳಿಕ ಇದು ಕುಸಿತ ಕಾಣಲು ಆರಂಭಿಸಿದ್ದು, ಬಹುತೇಕ ಬೋಟ್‌ಗಳ ಮಾಲಕರು ನಿರಾಶರಾಗಿದ್ದಾರೆ. ನಾಲ್ಕು ತಿಂಗಳುಗಳಿಂದ ಉತ್ತಮ ಮೀನುಗಾರಿಕೆ ನಡೆಯದೆ ಮೀನುಗಾರರು ಸಂಕಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರ್ವಹಣೆ ಖರ್ಚು ಹೆಚ್ಚಳ
ಸಮುದ್ರದಲ್ಲಿ ಮೀನುಗಳ ಅಭಾವ, ಡೀಸೆಲ್ ದರ ದುಪ್ಪಟ್ಟು, ಕಾರ್ಮಿಕರ ವೇತನ, ಬಲೆ, ರೋಪ್, ಕಬ್ಬಿಣದ ಸಾಮಗ್ರಿಗಳು, ಐಸ್ ದರ ಸಹಿತ ಇತರ ನಿರ್ವಹಣೆ ಖರ್ಚುಗಳು ಕೂಡ ಹೆಚ್ಚಳವಾದ್ದರಿಂದ ಮೀನುಗಾರಿಕೆಗೆ ಸದ್ಯ ಹೊಡೆತ ಬಿದ್ದಿದೆ. ಪರಿಣಾಮ ವಾಗಿ, ಮಂಗಳೂರಿನಲ್ಲಿ ಶೇ.70ರಷ್ಟು ಬೋಟ್‌ಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಬಂದರಿನಲ್ಲಿ ಲಂಗರು ಹಾಕಿವೆ. ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿರುವುದರಿಂದ ಮೀನುಗಾರಿಕೆಗೆ ತೆರಳಲು ಮೀನುಗಾರರು ಮನಸ್ಸು ಮಾಡುತ್ತಿಲ್ಲ.
ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಅವರು ‘ಸುದಿನ’ ಜತೆಗೆ ಮಾತನಾಡಿ, ಕೆಲವು ತಿಂಗಳಿಂದ ಮೀನುಗಾರಿಕೆ ಸಂಕಷ್ಟ ಸ್ಥಿತಿಯಲ್ಲಿದೆ. ಸಿಗುವುದಕ್ಕಿಂತ ಕಳೆದುಕೊಳ್ಳುವುದೇ ನಮಗೆ ಅಧಿಕವಾಗಿದೆ. ಹೀಗಾಗಿ ಮೀನುಗಾರಿಕೆ ಕಷ್ಟದಲ್ಲಿದೆ. ಮೀನು ಲಭ್ಯತೆಯೂ ಈಗ ಇಲ್ಲ. ಹೀಗೆ ಆದರೆ ಮುಂದೇನು ಎಂಬ ಆತಂಕ ಎದು ರಾಗಿದೆ ಎನ್ನುತ್ತಾರೆ.
ಬೋಟು ನಿಲ್ಲಲು ಜಾಗವೇ ಇಲ್ಲ!
ಮಂಗಳೂರು ಮೀನುಗಾರಿಕೆ ಧಕ್ಕೆಗೆ ಒಳಪಟ್ಟಂತೆ ಮೋಟರೀಕೃತ ನಾಡದೋಣಿ, ಯಾಂತ್ರೀಕೃತ ದೋಣಿ ಸೇರಿದಂತೆ ಸುಮಾರು 2000ಕ್ಕೂ ಅಧಿಕ ಇವೆ. ಈಗ ಇರುವ ಮಂಗಳೂರು ದಕ್ಕೆ 600 ಮೀಟರ್ ಉದ್ದವಿದೆ. ಇದರಲ್ಲಿ ಒಂದು ಸಾಲಿನಲ್ಲಿ ಕ್ರಮಪ್ರಕಾರವಾಗಿ ಹೆಚ್ಚಾ ಕಡಿಮೆ 350 ಬೋಟುಗಳಿಗೆ ನಿಲ್ಲಲು ಮಾತ್ರ ಅವಕಾಶವಿದೆ. ಉಳಿದಂತೆ ಎಲ್ಲ ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಒಂದರ ಹಿಂದೆ ಇನ್ನೊಂದರಂತೆ 7 ಸಾಲುಗಳಲ್ಲಿ ಬೋಟುಗಳು ನಿಲ್ಲುವ ಪರಿಸ್ಥಿತಿ ಇಲ್ಲಿದೆ. ಮರದ ಹಾಗೂ ಸ್ಟೀಲ್‌ಬೋಟುಗಳು ಇದರಲ್ಲಿ ಇರುವುದರಿಂದ ಬಹಳಷ್ಟು ಬಾರಿ ಬೋಟುಗಳು ಒಂದಕ್ಕೊಂದು ತಾಗಿ ಹಾನಿ ಸಂಭವಿಸುತ್ತಿವೆ. 7 ಸಾಲುಗಳಲ್ಲಿ ನಿಂತ ಬಳಿಕವೂ ಬಹಳಷ್ಟು ಬೋಟುಗಳು ಸ್ಥಳವಾಕಾಶವನ್ನು ಹುಡುಕಿಕೊಂಡು ಇತರ ಕಡೆ ಗಳಿಗೆ ಸಾಗುತ್ತವೆ. ಕಸ್ಬಾ ಬೆಂಗ್ರೆ, ಬೋಳೂರು, ಕುದ್ರೋಳಿ ಬೊಕ್ಕಪಟ್ಣ, ಜಪ್ಪು ಮುಂತಾದ ಕಡೆಗಳಲ್ಲಿ ನಿಲ್ಲಬೇಕಾಗಿದೆ.
ಡೀಸೆಲ್ ದರ ಗಗನಕ್ಕೆ; ಮೀನುಗಾರಿಕೆಗೆ ಸಂಕಷ್ಟ
ಮೀನುಗಾರಿಕೆ ಮುಖಂಡ ರಾಜರತ್ನ ಸನಿಲ್ ಅವರು ಹೇಳುವ ಪ್ರಕಾರ ಆಳ ಸಮುದ್ರ ಮೀನುಗಾರರು ತಿಂಗಳಿಗೆ ಮೂರು ಟ್ರಿಪ್ ಮೀನುಗಾರಿಕೆಗೆ ತೆರಳುತ್ತಾರೆ. ಪ್ರತಿ ಟ್ರಿಪ್‌ಗೆ ಸುಮಾರು 6 ಸಾವಿರ ಲೀ. ಡೀಸೆಲ್ ಖರ್ಚಾಗುತ್ತದೆ. ಮೂರು ಟ್ರಿಪ್‌ಗೆ 18 ಸಾವಿರ ಲೀ. ಡೀಸೆಲ್ ಅವಶ್ಯವಿದ್ದು, ಈ ಪೈಕಿ ಸರಕಾರ 9 ಸಾವಿರ ಲೀ.ಗೆ ಮಾತ್ರ ಸಬ್ಸಿಡಿ ನೀಡುತ್ತಿದೆ. ಉಳಿದ ಡೀಸೆಲ್ ಅನ್ನು ಮೀನುಗಾರರೇ ನಿಭಾಯಿಸಬೇಕಾಗುತ್ತದೆ. ಸದ್ಯ ಡೀಸೆಲ್ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಬೋಟ್‌ಗಳ ನಿರ್ವಹಣೆಯೇ ತ್ರಾಸವಾಗಿದೆ ಎನ್ನುತ್ತಾರೆ.
ಋತುವಿಗಿಂತ ಮೊದಲೇ ಸ್ಥಗಿತ
ಜನವರಿಯವರೆಗೂ ಉತ್ತಮ ಮೀನುಗಾರಿಕೆ ನಡೆದಿತ್ತು. ಆದರೆ ಬಳಿಕ ಮೀನು ಲಭ್ಯತೆ ಕಡಿಮೆಯಾಗುತ್ತಾ ಬಂತು. ಸದ್ಯ ಬೋಟ್‌ಗಳು ನಷ್ಟದಿಂದಲೇ ಮೀನುಗಾರಿಕೆ ನಡೆಸುವ ವಾತಾವರಣವಿದೆ. ಹೀಗಾಗಿ ಹಲವು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ. ಋತುವಿಗಿಂತ ಮೊದಲೇ ಮೀನುಗಾರಿಕೆ ಸ್ಥಗಿತಗೊಳ್ಳುವ ಪರಿಸ್ಥಿತಿ ಇದೆ. -ನಿತಿನ್ ಕುಮಾರ್, ಅಧ್ಯಕ್ಷರು, ಮೀನುಗಾರಿಕೆ ಅಭಿವೃದ್ಧಿ ನಿಗಮ