ತೋಕೂರು: ಕಿಂಡಿಅಣೆಕಟ್ಟಿನ ತ್ಯಾಜ್ಯಕ್ಕೆ ಮುಕ್ತಿ
Team Udayavani, Sep 2, 2018, 11:41 AM IST
ತೋಕೂರು: ಪಡು ಪಣಂಬೂರು ಗ್ರಾಮ ಪಂಚಾಯತ್‌ನ ತೋಕೂರು ಗ್ರಾಮದಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ನೀರು ಹರಿಯುವ ತೋಡಿನಲ್ಲಿ ಮರದ ರೆಂಬೆಗಳ ಸಹಿತ ಹಲವು ತ್ಯಾಜ್ಯ ವಸ್ತುಗಳು ಸ್ಥಳೀಯ ಕಿಂಡಿಅಣೆಕಟ್ಟಿನಲ್ಲಿ ಸಿಲುಕಿಕೊಂಡು ನೀರು ಹರಿಯಲು ಅನನುಕೂಲವಾಗಿರುವುದನ್ನು ಗ್ರಾಮಸ್ಥರ ಸಹಿತ ಪಂಚಾಯತ್ ಸದಸ್ಯರು, ಸಿಬಂದಿ ತೆರವುಗೊಳಿಸಿದರು.
ಸ್ವಚ್ಛತಾ ಕಾರ್ಯಕ್ಕೆ ಪಡು ಪಣಂಬೂರು ಗ್ರಾಮ ಪಂಚಾಯತ್, ವಿಶ್ವಬ್ಯಾಂಕ್ ನಿರ್ವಹಣಾ ಸಮಿತಿ, ಮಂಗಳೂರಿನ ರಾಮಕೃಷ್ಣ ಮಿಷನ್ ಹಾಗೂ ಜಿಲ್ಲಾ ಪಂಚಾಯತ್‌ನ ಸ್ವಚ್ಛತಾ ಮಿಷನ್‌ನ ಸದಸ್ಯರು ಕೈ ಜೋಡಿಸಿದ್ದಾರೆ. ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯ ಹೇಮನಾಥ್ ಅಮೀನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ಸಿಬಂದಿಗಳಾದ ದಿನಕರ್, ಅಭಿಜಿತ್, ವಿಶ್ವಬ್ಯಾಂಕ್ ನೀರು ನಿರ್ವಹಣಾ ಸಮಿತಿಯ ಅಧ್ಯಕ್ಷ ವಿನೋದ್ ಸುವರ್ಣ, ಗೋಪಾಲ ಮೂಲ್ಯ, ಗಣೇಶ್ ಅಮೀನ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನೀರು ಸರಾಗವಾಗಿ ಹರಿಯುತ್ತಿದೆ
ವಿಶ್ವ ಬ್ಯಾಂಕ್ ನೀರು ನಿರ್ವಹಣಾ ಸಮಿತಿಯ ಮೂಲಕ ನಿರ್ಮಾಣವಾಗಿರುವ ಈ ಕಿಂಡಿ ಅಣೆಕಟ್ಟಿನಲ್ಲಿ ಮಳೆ ನೀರು ಹರಿಯಲು ಅಡಚಣೆಯಾಗಿತ್ತಲ್ಲದೇ, ನಿರಂತರವಾಗಿ ಸುರಿಯುತ್ತಿದ್ದ ಮಳೆಯು ತೋಡನ್ನು ತುಂಬಿ, ಪಕ್ಕದ ಗದ್ದೆಗಳಿಗೆ ಹರಿಯುವ ಅಪಾಯವು ಇತ್ತು. ಇದನ್ನು ತೆರವುಗೊಳಿಸಿರುವುದರಿಂದ ನೀರು ಈಗ ಸರಾಗವಾಗಿ ಹರಿಯುತ್ತಿದೆ.