ಹಜ್ ಯಾತ್ರೆಗೆ ಕೂಡಿಟ್ಟ ಹಣದಿಂದ ಕೋವಿಡ್ 19 ಸಂತ್ರಸ್ಥರಿಗೆ ನೆರವು
Team Udayavani, Apr 24, 2020, 5:32 AM IST
ನೆರವು ನೀಡಲು ಮುಂದಾಗಿರುವ ಅಬ್ದುಲ್ ರೆಹಮಾನ್.
ಬಂಟ್ವಾಳ: ತಾಲೂಕಿನ ಗೂಡಿನಬಳಿಯ ವ್ಯಕ್ತಿಯೊಬ್ಬರು ಪವಿತ್ರ ಹಜ್ ಯಾತ್ರೆಗೆ ಕೈಗೊಳ್ಳುವ ನಿಟ್ಟಿನಲ್ಲಿ ಸಂಗ್ರಹಿಸಿಟ್ಟ ಹಣದಿಂದ ಲಾಕ್‌ಡೌನ್‌ನಿಂದ ತೊಂದರೆಗೊಳಗಾದವರಿಗೆ ದಿನ ಬಳಕೆಯ ವಸ್ತುಗಳನ್ನು ನೀಡುವುದಕ್ಕೆ ಮುಂದಾಗುವ ಮೂಲಕ ಮಾದರಿಯಾಗಿದ್ದಾರೆ.
ಗೂಡಿನಬಳಿ ನಿವಾಸಿ ಅಬ್ದುಲ್ ರೆಹಮಾನ್ ಅವರು ಕೂಲಿ ಕಾರ್ಮಿಕರಾಗಿದ್ದು, ತನ್ನ ದುಡಿಮೆಯ ಹಣದಲ್ಲಿ ಕುಟುಂಬವನ್ನು ಸಾಕುವ ಜತೆಗೆ ಒಂದಷ್ಟು ಹಣವನ್ನು ಹಜ್ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಯಾತ್ರೆಯ ಉದ್ದೇಶದಿಂದ ಹಲವು ವರ್ಷಗಳಿಂದ ಈ ರೀತಿಯಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ.
ಆದರೆ ಇದೀಗ ಆ ಹಣದಲ್ಲಿ ತೊಂದರೆಗೊಳಗಾದವರಿಗೆ ನೆರವು ನೀಡಲು ಮುಂದಾಗಿದ್ದು, ಜನರ ಕಷ್ಟಕ್ಕೆ ನೆರವಾಗಿ ಅವರ ಹೊಟ್ಟೆ ತುಂಬಿಸುವುದೇ ಪುಣ್ಯದ ಕೆಲಸ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ತನ್ನ ತಂದೆಯ ನಿರ್ಧಾರದ ಕುರಿತು ಅವರ ಅಬ್ದುಲ್ ರೆಹಮಾನ್ ಅವರ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದು, ಇದು ಇತರರಿಗೂ ಮಾದರಿಯಾಗಲಿ ಎಂದು ತಿಳಿಸಿದ್ದಾರೆ.