ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ : ಆರೋಪಿ ಸಹಿತ 22 ಲಕ್ಷ ಮೌಲ್ಯದ ಅಕ್ರಮ ದಾಸ್ತಾನು ವಶ
Team Udayavani, Jan 16, 2021, 10:37 PM IST
ಬಂಟ್ವಾಳ: ಬಿ.ಸಿ.ರೋಡು ಸಮೀಪದ ಮೊಡಂಕಾಪಿನಲ್ಲಿ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿ ಹಾಗೂ 2 ವಾಹನ ಸಹಿತ ಒಟ್ಟು 22 ಲಕ್ಷ ರೂ. ಮೌಲ್ಯದ ಅಕ್ರಮ ದಾಸ್ತಾನು ಹಾಗೂ ಸಾಗಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.
ಮೊಡಂಕಾಪು ವಿಯಾನ್ ತೋಟಮನೆ ನಿವಾಸಿ ಸಂದೀಪ್ ಲೋಬೊ ಬಂಧಿತ ಆರೋಪಿ. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದ.ಕ.ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತೆ ಶೈಲಜಾ ಕೋಟೆ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದು, ಮೊಡಂಕಾಪಿನಲ್ಲಿ ಟೊಯೊಟಾ ಇಟೋಸ್ ವಾಹನ ತಪಾಸಣೆ ಮಾಡಿದಾಗ 50.400 ಲೀ. ಅಕ್ರಮ ಗೋವಾ ಮದ್ಯ ಸಾಗಾಟ ಬೆಳಕಿಗೆ ಬಂದಿದೆ. ಬಳಿಕ ಆರೋಪಿಯ ವೆಲ್ಡಿಂಗ್ ಶಾಪ್ ಗೆ ದಾಳಿ ನಡೆಸಿದಾಗ ಅಕ್ರಮ ದಾಸ್ತಾನಿರಿಸಿದ 107.600 ಲೀ. ಮದ್ಯ ಹಾಗೂ ೩೪ ಲೀ.ಗೋವಾ ಬಿಯರ್ ಪತ್ತೆಯಾಗಿದೆ.
ಪ್ರಕರಣದಲ್ಲಿ ಟೊಯೋಟಾ ಇಟೋಸ್ ಕಾರು ಹಾಗೂ ಅಶೋಕ್ ಲೈಲೆಂಡ್ ಟೆಂಪೋ ಸಹಿತ 22 ಲಕ್ಷ ರೂ. ಮೊತ್ತದ ಮದ್ಯ ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಬಂಟ್ವಾಳ ವಲಯ ಅಬಕಾರಿ ನಿರೀಕ್ಷಕ ಶೇಕ್ ಇಮ್ರಾನ್, ಅಬಕಾರಿ ನಿರೀಕ್ಷಕರಾದ ವಿಜಯ ಕುಮಾರ್, ಉಪನಿರೀಕ್ಷಕರಾದ ಜಗನ್ನಾಥ್ ನಾಯ್ಕ ಹಾಗೂ ಸಿಬಂದಿ ಪಾಲ್ಗೊಂಡಿದ್ದು, ಬಂಟ್ವಾಳ ವಲಯ ನಿರೀಕ್ಷಕರು ಪ್ರಕರಣ ದಾಖಲಿಸಿದ್ದಾರೆ.