ಕುಕ್ಕೆಯಲ್ಲಿ ಸೇವೆಗಳಿಗೆ ಚಾಲನೆ
Team Udayavani, Sep 15, 2020, 12:06 AM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆಗಳು ಆರಂಭವಾಗಿದ್ದು, ಭಕ್ತರು ಆಗಮಿಸುತ್ತಿದ್ದಾರೆ.
ಸುಬ್ರಹ್ಮಣ್ಯ: ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುದೀರ್ಘ 5 ತಿಂಗಳ ಬಳಿಕ ಸೋಮವಾರದಿಂದ ಸೇವೆಗಳು ಆರಂಭಗೊಂಡಿದ್ದು, ಭಕ್ತರು ನಿಯಮಾವಳಿಯಂತೆ ಪಾಲ್ಗೊಂಡರು. ಸೆ. 1ರಿಂದಲೇ ದೇವಸ್ಥಾನಗಳಲ್ಲಿ ಸೇವೆ ಗಳಿಗೆ ಅವಕಾಶ ನೀಡಲಾಗಿದ್ದರೂ ಕುಕ್ಕೆಯಲ್ಲಿ ಕಾರಣಾಂತರಗಳಿಂದ ವಿಳಂಬವಾಗಿತ್ತು.
ಭಕ್ತರ ಸಂಖ್ಯೆ ಹೆಚ್ಚಳ
ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರವೂ ಅಧಿಕ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರುಶನ ಪಡೆದರು.
ಮೊದಲ ದಿನ 4 ಸರ್ಪಸಂಸ್ಕಾರ
ಸರ್ಪಸಂಸ್ಕಾರ ವಿಭಾಗದಲ್ಲಿ 30 ಸೇವೆಗಳಿಗೆ ಅವಕಾಶವಿದ್ದರೂ ಮೊದಲ ದಿನವಾದ ಸೋಮವಾರ ಕೇವಲ 4 ಸರ್ಪಸಂಸ್ಕಾರ ಸೇವೆಗಳಷ್ಟೇ ನಡೆದವು. ಈ ಮೊದಲು ಬುಕ್ಕಿಂಗ್ ಮಾಡಿದವರು ಇದ್ದರೂ ಅವರು ದಿನವನ್ನು ಮುಂದೂಡಿರುವುದು ಇದಕ್ಕೆ ಕಾರಣ. ಉಳಿದಂತೆ 60 ಆಶ್ಲೇಷಾ ಬಲಿ, 30 ನಾಗಪ್ರತಿಷ್ಠೆ, 11 ಶೇಷಸೇವೆ, 10 ಅಭಿಷೇಕ, 10 ಮಹಾಪೂಜೆ ಇತ್ಯಾದಿ ಸೇವೆಗಳು ನಡೆದಿವೆ. ಭಕ್ತರಿಗೆ ಹಾಳೆ ತಟ್ಟೆಯಲ್ಲಿ ಭೋಜನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.