‘ವಿಜ್ಞಾನದ ಅತಿ ಬೆಳವಣಿಗೆ ಪರಿಸರಕ್ಕೆ ಮಾರಕ’
Team Udayavani, Sep 15, 2018, 3:26 PM IST
ನೆಹರೂನಗರ: ವಿಜ್ಞಾನ ದೇಶಕ್ಕೆ ಪ್ರಗತಿಯನ್ನು ತಂದುಕೊಟ್ಟಿದೆ ನಿಜ. ಆದರೆ ಇದೇ ವಿಜ್ಞಾನ ನಮ್ಮನ್ನು ಅಧೋಗತಿಗೂ ತಳ್ಳಿದೆ. ವಿಜ್ಞಾನದ ಅತಿಯಾದ ಬೆಳವಣಿಗೆ ನಮ್ಮ ನೆಲ-ಜಲ ಸಂರಕ್ಷಣೆಗೆ ಮಾರಕವಾಗಿ ಪರಿಣಮಿಸಿದೆ. ಮುಂದೊಂದು ದಿನ ಮಾನವ ಇದಕ್ಕೆ ಸರಿಯಾದ ಬೆಲೆ ತೆರಬೇಕಾದೀತು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ 37ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಮಂತ ನಾಡು
ಶಿಕ್ಷಣ, ಶೈಕ್ಷಣಿಕ ವಿಚಾರವನ್ನು ಮಾತ್ರ ತಿಳಿಯಪಡಿಸದೆ ನೈತಿಕ ಮಟ್ಟವನ್ನು ಹೆಚ್ಚಿಸಿ ಕೊಳ್ಳಬೇಕು. ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ಭಾರತವು ಹಲವು ವಿಚಾರಗಳಲ್ಲಿ ಸಾಧನೆ ಮಾಡಿರುವುದು ಗಮನಾರ್ಹ. ಆದರೆ ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕವಾಗಿಯೂ ಶ್ರೀಮಂತವಾಗಿರುವ ಈ ನಾಡಿನಲ್ಲಿ ಇಂದು ಹಲವು ಆಭಾಸಗಳು ನಡೆಯುತ್ತಿರುವುದು ಮಾತ್ರ ಶೋಚನೀಯ ಎಂದರು.
ಸಾಮರಸ್ಯದ ಬಾಳು
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಮಾತನಾಡಿ, ಲೋಕಮಾನ್ಯ ಬಾಲಗಂಗಾಧರ ತಿಲಕರು ದೂರದೃಷ್ಟಿಯಿಂದ ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವದ ಉದ್ದೇಶ ಭಾರತೀಯರು ಒಗ್ಗೂಡಬೇಕು. ಹಿಂದೂ ಬಾಂಧವರು ಸಾಮರಸ್ಯದಿಂದ ಬಾಳಬೇಕು ಎನ್ನುವುದಾಗಿದೆ. ಅವರ ಉದ್ದೇಶವನ್ನು ಸಾಫಲ್ಯಗೊಳಿಸುವಲ್ಲಿ ಎಲ್ಲ ಹಿಂದೂಗಳು ಒಗ್ಗೂಡಿ ಮುಂದುವರಿಯಬೇಕಿದೆ ಎಂದರು.
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಗೋವಿಂದೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿಗಾರ್ ವಂದಿಸಿದರು. ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಮೈಥಿಲಿ ನಿರೂಪಿಸಿದರು.