ನಿವೃತ್ತ ಪೊಲೀಸರ ಆರೋಗ್ಯ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ
Team Udayavani, Apr 4, 2022, 12:35 PM IST
ಉಡುಪಿ: ನಿವೃತ್ತ ಪೊಲೀಸರಿಗೆ ಸರಕಾರ ಜಾರಿಗೊಳಿಸಿರುವ ಆರೋಗ್ಯ ಭಾಗ್ಯ ಯೋಜನೆಯು ಇನ್ನಷ್ಟು ಪರಿಣಾಮಕಾರಿಯಾಗಿ, ಸಮರ್ಪಕವಾಗಿ ಜಾರಿಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಿಎಸ್‌ಪಿ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಮ್ಯಾಥ್ಯೂ ಅರ್ಚಿಬಾಲ್ ಡಿ’ಸೋಜಾ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಉಡುಪಿಯ ಪೊಲೀಸ್ ಕವಾಯತು ಮೈದಾನ (ಚಂದು ಮೈದಾನ)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಿವೃತ್ತ ಪೊಲೀಸರಿಗೆ ಒದಗಿಸಿರುವ ಆರೋಗ್ಯ ಭಾಗ್ಯ ಯೋಜನೆಯನ್ನು ನಿರ್ದಿಷ್ಟ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಜಾರಿಗೊಳಿಸಿದ್ದು, ಚಿಕಿತ್ಸೆ ನೀಡುವ ಅಸ್ಪತ್ರೆಗಳ ಸಂಖ್ಯೆಯನ್ನು ವಿಸ್ತರಿಸಬೇಕು. ಅಲ್ಲದೇ ಚಿಕಿತ್ಸಾ ವೆಚ್ಚವನ್ನು 1 ಲ.ರೂ. ಗಳಿಗೆ ಮಾತ್ರ ಸೀಮಿತಗೊಳಿಸಿದ್ದು, ಇದನ್ನು ಹೆಚ್ಚುಗೊಳಿಸಬೇಕು. ಪೊಲೀಸ್ ಅಧಿಕಾರಿ ಮತ್ತು ಸಿಬಂದಿ ಯಾವುದೇ ದುಶ್ಚಟಗಳಿಗೆ ಒಳಗಾಗದೇ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ಪೊಲೀಸ್ ಧ್ವಜ ಬಿಡುಗಡೆ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬಂದಿಗೆ ಕ್ಷೇಮ ನಿಧಿಯ ಚೆಕ್‌ಗಳನ್ನು ವಿತರಿಸಲಾಯಿತು. ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸ್ವಾಗತಿಸಿ ಸೆನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ನಿರೂಪಿಸಿದರು. ಎಎಸ್‌ಪಿ ಸಿದ್ದಲಿಂಗಪ್ಪ ವಂದಿಸಿದರು.