ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ
Team Udayavani, May 27, 2022, 12:01 AM IST
ಕುಂದಾಪುರ : ಅಸಾನಿ ಚಂಡಮಾರುತ ಪರಿಣಾಮದಿಂದಾಗಿ ಕಡಲು ಪ್ರಕ್ಷುಬ್ಧಗೊಂಡ ಕಾರಣ ವಿಷಕಾರಿ ಸಮುದ್ರ ಜೀವಿ ಚುಂಗ್ರಿ (ಮುಳ್ಳುಗೆರೆ) ದಡದತ್ತ ದೌಡಾಯಿ ಸುತ್ತಿದ್ದು, ಸಾಂಪ್ರದಾಯಿಕ ಮೀನು ಗಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಗಂಗೊಳ್ಳಿ, ಮರವಂತೆ, ಕೊಡೇರಿ, ಶಿರೂರು, ಮಲ್ಪೆ ಸೇರಿದಂತೆ ಎಲ್ಲೆಡೆ ನಿತ್ಯ ಬದುಕಿನ ಕೂಳಿಗಾಗಿ ಕಡಲಿಗಿಳಿದ ಮೀನುಗಾರರ ಬಲೆಗೆ ಅಪಾರ ಪ್ರಮಾಣದಲ್ಲಿ ಚುಂಗ್ರಿ ಬೀಳುತ್ತಿದ್ದು, ಇದರಿಂದ ಮೀನಿನ ಬಲೆ ಸಂಪೂರ್ಣ ಹಾನಿಗೀಡಾಗುತ್ತಿದೆ. ಗಂಗೊಳ್ಳಿ ಕಡಲಿನಲ್ಲಿ ಕಳೆದ 2-3 ದಿನಗಳಿಂದ ಮೀನುಗಾರಿಕೆಗೆ ಇಳಿದ ಬಹುತೇಕ ಮೀನುಗಾರರ ಬಲೆಗಳಿಗೆ ಚುಂಗ್ರಿ ಬಿದ್ದಿದ್ದು, ಮತ್ಸಕ್ಷಾಮ ಮತ್ತು ಹವಾಮಾನ ವೈಪರೀತ್ಯಗಳಿಂದಾಗಿ ಸಂಕಷ್ಟಕ್ಕೀಡಾದ ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಏನಿದು ಚುಂಗ್ರಿ?
ಕುಂದಾಪ್ರ ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಚುಂಗ್ರಿ ಎಂದು ಕರೆಯಲಾಗುತ್ತಿದ್ದು, ಇದೊಂದು ರೀತಿಯ ಮುಳ್ಳು ಹಂದಿ ಗಳಂತೆ ತೀಕ್ಷಣವಾದ ನಂಜು ಮತ್ತು ವಿಷಕಾರಿ ಮುಳ್ಳುಗಳನ್ನು ಹೊಂದಿವೆ. ಈ ಮುಳ್ಳುಗಳು ಮೀನಿನ ಬಲೆಯನ್ನು ನಾಶ ಮಾಡುತ್ತವೆ. ಸಾಂಪ್ರದಾಯಿಕ ಮೀನುಗಾರಿಕೆ ದೋಣಿಯ ಬಲೆ ತುಂಬಾ ಸೂಕ್ಷ್ಮವಾಗಿದ್ದು, ಚುಂಗ್ರಿಯಂಥ ಜಲಚರಗಳು ಸಿಕ್ಕಿಹಾಕಿಕೊಂಡರೆ ಹರಿಯುತ್ತದೆ. ಸಾಮಾನ್ಯವಾಗಿ ಫಿಶಿಂಗ್ ಅಥವಾ ಪಸೀìನ್ ಬೋಟುಗಳ ಬಲೆಗೆ ಬಿದ್ದರೆ ಅದನ್ನು ಸಮುದ್ರದಲ್ಲೇ ವಿಸರ್ಜಿಸುತ್ತಾರೆ. ಕೆಲವು ಮೀನುಗಾರರು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಮಾರುತ್ತಾರೆ. ಅದು ಪ್ರೋಟಿನ್‌ಯುಕ್ತವಾಗಿದ್ದು ತೆಂಗಿನಮರಗಳಿಗೆ ಉತ್ತಮ ಗೊಬ್ಬರವಾಗುತ್ತದೆ ಹಾಗೂ ಫಾರ್ಮ್ ಕೋಳಿಗಳಿಗೆ ಒಳ್ಳೆಯ ಆಹಾರವಾಗುತ್ತದೆ.