ಉದ್ಯಮಿ ಕಟ್ಟೆ ಭೋಜಣ್ಣ ಸಾವು ಪ್ರಕರಣ; ಆತ್ಮಹತ್ಯೆಗೆ ಪ್ರಚೋದನೆ: ಗಣೇಶ್ ಶೆಟ್ಟಿ ಬಂಧನ
Team Udayavani, May 28, 2022, 12:42 AM IST
ಕುಂದಾಪುರ: ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಯಾನೆ ಕಟ್ಟೆ ಭೋಜಣ್ಣ (79) ಆತ್ಮಹತ್ಯೆ ಪ್ರಕರಣ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರನ್ನು ಶುಕ್ರವಾರ ಕುಂದಾಪುರ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮತ್ತೋರ್ವ ಆರೋಪಿ ಎಚ್. ಇಸ್ಮಾಯಿಲ್‌ಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ.
ಉದ್ಯಮಿ ಗಣೇಶ್ ಶೆಟ್ಟರನ್ನು ಜೆಎಂಎಫ್‌ಸಿ ನ್ಯಾಯಾಧೀಶೆ ರೋಹಿಣಿ ಅವರ ನಿವಾಸದಲ್ಲಿಯೇ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕೋಟ್ಯಾಧಿಪತಿ ಕಟ್ಟೆ ಗೋಪಾಲಕೃಷ್ಣ ಅವರು ಮೇ 26ರ ಬೆಳಗ್ಗೆ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯ ಸಿಟೌಟ್‌ನಲ್ಲಿ ತನ್ನ ಪಿಸ್ತೂಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದ ಡೆತ್‌ನೋಟ್ ಪ್ರಕಾರ ಗಣೇಶ್ ಶೆಟ್ಟಿ ಹಾಗೂ ಎಚ್. ಇಸ್ಮಾಯಿಲ್ ಅವರು ಗೋಲ್ಡ್ ಜುವೆಲರಿ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ 3.34 ಕೋ.ರೂ., 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಇದರ ಬಡ್ಡಿ, ಅಸಲು ಸೇರಿ ಈಗ 9 ಕೋ.ರೂ. ಆಗಿದ್ದು, ಇದನ್ನು ನೀಡದೇ ಮೋಸ ಮಾಡಿರುವುದಾಗಿ ಬರೆದುಕೊಂಡಿದ್ದರು.
ಅಂತ್ಯಸಂಸ್ಕಾರ
ಕಟ್ಟೆ ಗೋಪಾಲಕೃಷ್ಣ ಅವರ ಮೃತದೇಹದ ಅಂತ್ಯ ಸಂಸ್ಕಾರ ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆಯ ರುದ್ರಭೂಮಿಯಲ್ಲಿ ಶುಕ್ರವಾರ ನೆರವೇರಿತು. ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್, ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಮೊಗವೀರ ಮುಖಂಡರಾದ ಗೋಪಾಲ್ ಮೆಂಡನ್, ಕೆ.ಕೆ. ಕಾಂಚನ್ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು.
ತನಿಖೆ ನಡೆಯುತ್ತಿದೆ
ಉದ್ಯಮಿ ಕಟ್ಟೆ ಗೋಪಾಲಕೃಷ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಆತ್ಮಹತ್ಯೆಗೆ ಮುನ್ನ ಒಂದು ಡೆತ್‌ನೋಟ್ ಬರೆದಿಟ್ಟಿದ್ದು, ಅದರ ಆಧಾರದ ಮೇಲೆ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಇಸ್ಮಾಯಿಲ್ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಹಣದ ವ್ಯವಹಾರದ ಕುರಿತು ಡೆತ್ ನೋಟ್‌ನಲ್ಲಿ ಬರೆದಿಟ್ಟಿರುವುದು ಬಿಟ್ಟರೆ ಇನ್ನಾವುದೇ ದಾಖಲೆಗಳು ಇದುವರೆಗೆ ಇಲಾಖೆಗೆ ಲಭಿಸಿಲ್ಲ. ಇದರ ಬಗ್ಗೆ ಇನ್ನಷ್ಟೇ ಪರಿಶೀಲನೆ ನಡೆಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಹೇಳಿದ್ದಾರೆ.
ನಷ್ಟದಲ್ಲಿದ್ದರೇ..?
ಹತ್ತಾರು ಉದ್ಯಮಗಳನ್ನು ಹೊಂದಿದ್ದ ಕಟ್ಟೆ ಗೋಪಾಲಕೃಷ್ಣ ಅವರು ಕೊರೊನಾದ ಅನಂತರ ಬೆಂಗಳೂರಿನಲ್ಲಿದ್ದ ಹೊಟೇಲ್‌ಉದ್ಯಮ, ವಸ್ತ್ರೋದ್ಯಮದÇÉೆಲ್ಲ ನಷ್ಟದಲ್ಲಿದ್ದರು ಎನ್ನಲಾಗುತ್ತಿದೆ.