ಸುಳ್ಳು ಹೇಳಿ ಲಕ್ಷಾಂತರ ರೂ. ವಂಚನೆ; ಆರೋಪಿ ಬಂಧನ
Team Udayavani, Jul 5, 2022, 11:38 PM IST
ಕುಂದಾಪುರ : ಕಸ್ಟಮ್ ಅಧಿಕಾರಿ ಎಂದು, ಸರಕಾರಿ ಉದ್ಯೋಗ ಕೊಡಿಸುತ್ತೇನೆ, ಮಾಯ ಮಂತ್ರ ಪೂಜೆ ಮಾಡಿಸುತ್ತೇನೆ ಎಂದು ಸುಳ್ಳು ಹೇಳಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿದ್ದ ಕುಂದಾಪುರದ ಕಲ್ಲಾಗಾರ ಮಂಗಲಪಾಂಡೆ ರೋಡ್ ನಿವಾಸಿ ಮನೋಜ ನರಸಿಂಹ ಪೂಜಾರಿ (30)ಯನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೂಲತಃ ಕುಂದಾಪುರದ ಕಲ್ಲಾಗಾರ ನಿವಾಸಿ ಪ್ರಸ್ತುತ ಸೊರಬದ ಚಂದ್ರಗುತ್ತಿ ಈಶ್ವರ ದೇವಾಲಯದ ಎದುರು ನಾಡಿಗಮನೆಯಲ್ಲಿದ್ದ ಮನೋಜ ನರಸಿಂಹ ಪೂಜಾರಿ ವೃತ್ತಿಯಲ್ಲಿ ಮೆಕಾನಿಕ್. ಆದರೆ ತಾನೊಬ್ಬ ಸಿಬಿಐ, ಸಿಐಡಿ, ಕಸ್ಟಮ್ ಅಧಿಕಾರಿ ಎಂದು ಹೇಳಿಕೊಂಡು ನೂರಾರು ಜನರಲ್ಲಿ ನಿಮಗೆ ಸರಕಾರಿ ನೌಕರಿ ಕೊಡಿಸುತ್ತೇನೆ ಎಂಬ ಭರವಸೆ ನೀಡಿ ಅವರಿಂದ ಲಕ್ಷಾಂತರ ರೂ. ವಸೂಲಿ ಮಾಡಿ ನಾಪತ್ತೆಯಾಗುತ್ತಿದ್ದ. ಒಂದೊಮ್ಮೆ ಭೇಟಿಯಾದರೂ ಮಾಯ ಮಂತ್ರದ ಹೆಸರಿನಲ್ಲಿ ಅವರನ್ನು ಬೆದರಿಸುತ್ತಿದ್ದ. ಶಿರಸಿ, ಸೊರಬ, ಚಂದ್ರಗುತ್ತಿ, ಹಾವೇರಿ, ಹುಬ್ಬಳ್ಳಿ, ಮಂಗಳೂರು, ಚಿಕ್ಕಮಗಳೂರು ಮೊದಲಾದೆಡೆಯ ನೂರಾರು ಮಂದಿ ಈತನಿಂದ ವಂಚನೆಗೆ ಒಳಗಾಗಿದ್ದಾರೆ. ಈ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು ಅವರ ತಂದೆ ತಾಯಿ ಮೂಲಕ ಉದ್ಯೋಗ ಆಮಿಷಕ್ಕೆ ಹಣ ಸಂಗ್ರಹಿಸುತ್ತಿದ್ದ. ಮಾಟ, ಮಂತ್ರ, ಸಂತಾನಭಾಗ್ಯ, ಸ್ತ್ರೀ ವಶೀಕರಣದಲ್ಲಿ ಪಾರಂಗತ ಎಂದು ಇನ್ನೊಬ್ಬರ ಮನಸ್ಸಿನ ವೀಕ್‌ನೆಸ್ ತಿಳಿದು ಅದರಂತೆ ಮಾತನಾಡಿ ಹಣ ವಸೂಲಿಗಿಳಿಯುತ್ತಿದ್ದ. ಹಣ ಮರಳಿ ಪಡೆಯದಂತೆ ಬೆದರಿಸುತ್ತಿದ್ದ.
ಶಿರಸಿಯ ಹಿತ್ತಲಗದ್ದೆಯ ವಿನಾಯಕ ಮಂಜುನಾಥ ಹೆಗಡೆ ಅವರಿಗೆ ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು 7.7 ಲಕ್ಷ ರೂ. ಪಡೆದು ಮೋಸ ಮಾಡಿದ್ದ. ಯಾವುದೇ ನೌಕರಿ ಕೊಡಿಸದ ಹಿನ್ನೆಲೆಯಲ್ಲಿ ಪದೇ ಪದೆ ಕೇಳಿದಾಗ ಸ್ಪಂದಿಸಲಿಲ್ಲ. ಹಾಗಾಗಿ ಪ್ರಕರಣ ದಾಖಲಾಗಿತ್ತು. ಕಳೆದ ನಾಲ್ಕು ತಿಂಗಳುಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ.