ನಾಡ-ಮೊವಾಡಿ ಸೇತುವೆ ಸಂಪರ್ಕ ರಸ್ತೆ ವಿಸ್ತರಣೆಗೆ ಒಪ್ಪಿಗೆ
ವಾರದೊಳಗೆ ಕಾಮಗಾರಿ ಆರಂಭ ನಿರೀಕ್ಷೆ , ಎರಡೂ ಕಡೆಯಿಂದಲೂ ತಲಾ 100 ಮೀ. ರಸ್ತೆ ನಿರ್ಮಾಣ
Team Udayavani, Jan 26, 2021, 2:40 AM IST
ಕುಂದಾಪುರ: ತ್ರಾಸಿ ಹಾಗೂ ನಾಡ ಗ್ರಾಮಗಳನ್ನು ಸಂಪರ್ಕಿಸುವ ಮೊವಾಡಿ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆಯನ್ನು ಮೊದಲಿದ್ದ ಕರಡು ಯೋಜನೆಗಿಂತ ಹೆಚ್ಚು ದೂರದವರೆಗೆ ವಿಸ್ತರಿಸಲು ಈಗ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಿಂದ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ವಾರದೊಳಗೆ ಸಂಪರ್ಕ ರಸ್ತೆಯ ನಿರ್ಮಾಣ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮೊವಾಡಿ ಬಳಿ ಸೌಪರ್ಣಿಕಾ ನದಿಗೆ ಸೇತುವೆ ನಿರ್ಮಾಣಕ್ಕೆ 9.28 ಕೋ.ರೂ. ಅನುದಾನ ಮಂಜೂರಾಗಿತ್ತು. ಈಗ ಸೇತುವೆಯ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸಂಪರ್ಕ ರಸ್ತೆ ಕಾಮಗಾರಿ ಆಗದಿರುವುದರಿಂದ ಸೇತುವೆಯು ವಾಹನ ಸಂಚಾರಕ್ಕೆ ಮುಕ್ತವಾಗಲು ವಿಳಂಬವಾಗಿದೆ.
ತಲಾ 100 ಮೀ. ವಿಸ್ತರಣೆ :
ಈ ಸೇತುವೆಯನ್ನು ಮೊವಾಡಿ ಹಾಗೂ ನಾಡ ಕಡೆಯಿಂದ ಸಂಪರ್ಕಿಸುವ ಕಡೆಗಳಲ್ಲಿ ತಲಾ 35 ಮೀ. ರಸ್ತೆ ನಿರ್ಮಾಣಕ್ಕೆ ಈ ಮೊದಲು ತಯಾರಿಸಿದ ಕರಡು ನಕ್ಷೆಯಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ ಇದರಿಂದ ಅಷ್ಟೇನು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಊರವರ ಬೇಡಿಕೆ ಮೇರೆಗೆ ರಸ್ತೆ ವಿಸ್ತರಣೆಗೆ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಈಗ ಮೊವಾಡಿ ಕಡೆಯಿಂದ 103 ಮೀ. ಹಾಗೂ ನಾಡ ಕಡೆಯಿಂದ 100 ಮೀ. ರಸ್ತೆ ವಿಸ್ತರಣೆಯಾಗಲಿದೆ.
ಹತ್ತಿರದ ಮಾರ್ಗ :
ಮೊವಾಡಿ ನಿವಾಸಿಗಳಿಗೆ ತ್ರಾಸಿ ಅಥವಾ ಮುಳ್ಳಿಕಟ್ಟೆಗೆ ಬರಲು ಕನಿಷ್ಠ 3 ಕಿ.ಮೀ. ದೂರವಿದೆ. ಆದರೆ ಸೇತುವೆಯಾದರೆ ನಾಡ ಪೇಟೆಗಿರುವ ಅಂತರ ಕೇವಲ 1 ಕಿ.ಮೀ. ಮಾತ್ರ. ಮೊವಾಡಿಯಲ್ಲಿ ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಿರುವುದರಿಂದ ಪಡುಕೋಣೆ ಇಗರ್ಜಿಗೆ ಹೋಗಲು ಕೂಡ ಹತ್ತಿರದ ಮಾರ್ಗವಾಗಿದೆ. ಈ ಭಾಗದಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳಿದ್ದು, ಸೇತುವೆಯಿಂದ ಸಾವಿರಾರು ಮಂದಿಗೆ ಪ್ರಯೋಜನವಾಗಲಿದೆ.
ಸುದಿನ ವರದಿ :
ಈ ನಾಡ – ಮೊವಾಡಿ ಸೇತುವೆ ನಿರ್ಮಾಣ, ಕಾಮಗಾರಿ ವಿಳಂಬ, ರಸ್ತೆಗಾಗಿ ಜಾಗ ಭೂಸ್ವಾಧೀನ ಆಗದಿರುವ ಕುರಿತಂತೆ “ಉದಯವಾಣಿ ಸುದಿನ’ವು ಅನೇಕ ಬಾರಿ ವಿಶೇಷ ವರದಿಗಳನ್ನು ಪ್ರಕಟಿಸಿ ಸಂಬಂಧಪಟ್ಟವರ ಗಮನಸೆಳೆದಿತ್ತು.
ಮೊವಾಡಿಯ ಸೇತುವೆಯನ್ನು ಸಂಪರ್ಕಿಸುವ ರಸ್ತೆಯ ವಿಸ್ತರಣೆಗೆ ನಾವು ಪ್ರಸ್ತಾವ ಕಳುಹಿಸಿದ್ದೆವು. ಅದಕ್ಕೀಗ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಸಹ ನಡೆಸಿ, ಭೂಸ್ವಾಧೀನ ಪಡಿಸಿಕೊಳ್ಳುವ ಮಾಲಕರಿಗೆ ಕೊಡಬೇಕಾದ ದರ ಪಟ್ಟಿಯನ್ನು ಕೂಡ ನಿಗದಿಪಡಿಸಲಾಗಿದೆ. ವಾರದೊಳಗೆ ರಸ್ತೆ ಕಾಮಗಾರಿ ಆರಂಭಗೊಳ್ಳಲಿದ್ದು, ಮಾರ್ಚ್‌ನೊಳಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.– ಸಂಗಮೇಶ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಲ್ಪೆ ಬೀಚ್ನಿಂದ ಸೈಂಟ್ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್ ಸಾಹಸ ಯಾನ
ಬಾಲಕನಿಗೆ ಲೈಂಗಿನ ದೌರ್ಜನ್ಯ: ಚಂದ್ರ ಹೆಮ್ಮಾಡಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ
ಕಂಬಳ ಕರೆಗೆ ಶಾಶ್ವತ ವಿದಾಯ ಹೇಳಿದ ಅಲೆವೂರು- ತಡಂಬೈಲ್ ಕುಟ್ಟಿ.. ಅಭಿಮಾನಿಗಳ ಕಂಬನಿ
ಎಳ್ಳಾರೆ ಚೆನ್ನಿಬೆಟ್ಟು : ತಂಗುದಾಣ ಇದೆ, ಗ್ರಾಮಸ್ಥರಿಗಿಲ್ಲ ಬಸ್ ವ್ಯವಸ್ಥೆಯ ಭಾಗ್ಯ
ವಾರದೊಳಗೆ ವಾರಾಹಿ ಯೋಜನೆಯ ರೂಪುರೇಷೆಗಳ ಸಮಗ್ರ ವರದಿ: ಪ್ರತಾಪ್ಚಂದ್ರ ಶೆಟ್ಟಿ