ಪಾರಂಪಳ್ಳಿ: ನಮ್ಮೂರು ನಮ್ಮ ಕೆರೆ ಹಸ್ತಾಂತರ
Team Udayavani, Apr 28, 2022, 1:18 PM IST
ಕೋಟ: ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಿಂದ ಕೆರೆಗಳ ಅಭಿವೃದ್ಧಿಯಾಗಿ ಪರಿಸರದ ಅಂತರ್ಜಲ ವೃದ್ಧಿಯಾಗುತ್ತಿದ್ದು, ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಕೋಟದ ಉದ್ಯಮಿ ಆನಂದ ಸಿ.ಕುಂದರ್ ಹೇಳಿದರು.
ಅವರು ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು-ನಮ್ಮ ಕೆರೆ ಯೋಜನೆಯಡಿ ಸಾಲಿಗ್ರಾಮ ಪಾರಂಪಳ್ಳಿಯಲ್ಲಿ ಅಭಿವೃದ್ಧಿ ಗೊಂಡ ಕೆಮ್ಮಣ್ಣು ಕೆರೆ ಹಸ್ತಾಂತರ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಆಧುನಿಕತೆಗೆ ಸಿಲುಕಿ ಕೆರೆಗಳು ಮಾಯವಾಗುತ್ತಿವೆ. ನೀರಿನ ಉಳಿವಿಗಾಗಿ ಕೆರೆಗಳ ಉಳಿವು ಅತ್ಯಗತ್ಯ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್ ಬಿ. ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ಇದುವರೆಗೆ 485 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 36 ಕೋಟಿ ರೂ.ಗೂ ಅಧಿಕ ಹಣವನ್ನು ಇದಕ್ಕೆ ವಿನಿಯೋಗ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 13 ಕೆರೆಗಳನ್ನು ಅಭಿವೃದ್ಧಿಪಡಿಸಿ, ಸಮಿತಿಯನ್ನು ರಚಿಸಿ ಸಾರ್ವಜನಿಕರ ಉಪಯೋಗಕ್ಕೆ ಹಸ್ತಾತರಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಕೆಮ್ಮಣ್ಣುಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಹಂದೆ ಅಧ್ಯಕ್ಷತೆ ವಹಿಸಿದ್ದರು.
ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಮುಖ್ಯಾ ಧಿಕಾರಿ ಶಿವ ನಾಯ್ಕ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ದಿನೇಶ್ ಶೇರಿಗಾರ್, ಕೋಟ ವಿವೇಕ ಪ್ರೌಢಶಾಲೆಯ ಶಿಕ್ಷಕ ನರೇಂದ್ರಕುಮಾರ್ ಕೋಟ, ಉದ್ಯಮಿ ಸುರೇಶ್ ಹಂದೆ ಉಪಸ್ಥಿತರಿದ್ದರು.
ಯೋಜನೆಯ ಕೋಟ ವಲಯದ ಮೇಲ್ವಿಚಾರಕಿ ಸುಲೋಚನಾ ಸ್ವಾಗತಿಸಿದರು. ಕೃಷಿ ಅಧಿಕಾರಿ ರಾಜೇಂದ್ರ ನಿರೂಪಿಸಿದರು. ಆಂತರಿಕ ಲೆಕ್ಕಪರಿಶೋಧಕ ಮಂಜುನಾಥ ವಂದಿಸಿದರು.