ಮುಳ್ಳಿಕಟ್ಟೆ – ಗಾಣದಮಕ್ಕಿ : ಕುಡಿಯುವ ನೀರಿನ ಸಮಸ್ಯೆ
Team Udayavani, Apr 17, 2020, 5:44 AM IST
ಕುಂದಾಪುರ: ಹೊಸಾಡು ಗ್ರಾಮದ ಮುಳ್ಳಿಕಟ್ಟೆ ವಾರ್ಡಿನ ಗಾಣದಮಕ್ಕಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಇಲ್ಲಿರುವ ಸರಕಾರಿ ಬೋರ್‌ವೆಲ್‌ನಲ್ಲಿ ಸಿಗುವ ನೀರು ಕುಡಿಯಲು, ಅಡುಗೆಗೆ ಬಳಕೆಗೆ ಅಸಾಧ್ಯವಾಗಿದೆ. ಪಂಚಾಯತ್ ಬಾವಿಯಲ್ಲೂ ಕೂಡ ನೀರು ಬತ್ತಿ ಹೋಗಿದೆ.
ಮುಳ್ಳಿಕಟ್ಟೆ – ಗಾಣದಮಕ್ಕಿ ಪ್ರದೇಶದ 30-35 ಮನೆಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಈ ಹಿಂದೆಯೇ ಊರವರು ಪಂಚಾಯತ್‌ಗೆ ಮನವಿ ಸಲ್ಲಿಸಿದ್ದರು. ಆದರೂ ಈವರೆಗೆ ಪರ್ಯಾಯ ಕ್ರಮಗಳನ್ನು ಮಾತ್ರ ಪಂಚಾಯತ್ ಮಾಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಪ್ರತಿ ವರ್ಷ ಕೂಡ ಎಪ್ರಿಲ್‌ನಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಆದರೂ ಶಾಶ್ವತ ಪರಿಹಾರ ಕ್ರಮಗಳನ್ನು ಮಾತ್ರ ಸಂಬಂಧಪಟ್ಟವರು ಕೈಗೊಂಡಿಲ್ಲ. ಇದರಿಂದ ಇಲ್ಲಿನ ಜನ ಕೊರೊನಾ ಸಂಕಟದ ಮಧ್ಯೆಯೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಗಮನಹರಿಸಿ, ಶೀಘ್ರ ನಮ್ಮ ಸಮಸ್ಯೆಗೆ ಸ್ಪಂದಿಸಲಿ ಎಂಬುದಾಗಿ ಸ್ಥಳೀಯರಾದ ರಾಘವೇಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.
ಪರ್ಯಾಯ ವ್ಯವಸ್ಥೆ
ಗಾಣದಮಕ್ಕಿ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗ್ಗೆ ಗಮನದಲ್ಲಿದ್ದು, ಅಲ್ಲಿರುವ ಬಾವಿಯ ಕೆಸರು ತೆಗೆದು, ಕಲ್ಲು ತೆಗೆಯುವ ಕೆಲಸವನ್ನು ಪಂಚಾಯತ್ ವತಿಯಿಂದ ಶೀಘ್ರ ಮಾಡಿ, ಅಲ್ಲಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎನ್ನುವುದಾಗಿ ಹೊಸಾಡು ಗ್ರಾಮ ಪಂಚಾಯತ್ ಪಿಡಿಒ ಪಾರ್ವತಿ ಭರವಸೆ ನೀಡಿದ್ದಾರೆ.
ಟೆಂಡರ್ ಕರೆಯಲಾಗಿದೆ
ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಟ್ಯಾಂಕರ್‌ನಲ್ಲಿ ಕುಡಿಯುವ ನೀರಿನ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಎ.19 ಕೊನೆ ದಿನವಾಗಿದೆ. ಆ ಬಳಿಕ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
– ತಿಪ್ಪೇಸ್ವಾಮಿ, ಕುಂದಾಪುರ ತಹಶೀಲ್ದಾರ್