ಪರಿಸರ ಪರಿಣಾಮ ಕರಡು: ನೋಟಿಸ್
Team Udayavani, Jul 9, 2020, 5:33 AM IST
ಬೆಂಗಳೂರು: ಕೇಂದ್ರ ಸರ್ಕಾರದ “ಪರಿಸರ ಪರಿಣಾಮ ಅಧ್ಯಯನ-2020” (ಇಐಎ) ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಕೇಂದ್ರ ಪರಿಸರ ಸಚಿವಾಲಯಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ ಚಾರಿಟಬಲ್ ಆಂಡ್ ವೆಲ್‌ಫೇರ್ ಟ್ರಸ್ಟ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು. ಅಲ್ಲದೆ, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕೆಂಬ ಮನವಿ ಕುರಿತು ಜು.15ರೊಳಗೆ ಅಭಿಪ್ರಾಯ ತಿಳಿಸುವಂತೆ ಇದೇ ವೇಳೆ ನ್ಯಾಯಪೀಠ ಕೇಂದ್ರ ಪರಿಸರ ಸಚಿವಾಲಯಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮೊದಲು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ವಾದ ಮಂಡಿಸಿ, ಕರಡು ಅಧಿಸೂಚನೆ ಪ್ರಕಟಣೆ, ಆಕ್ಷೇಪಣೆ ಸಲ್ಲಿಸುವ ಅವಧಿ ಎಲ್ಲವೂ ಲಾಕ್‌ಡೌನ್ ಸಂದರ್ಭದಲ್ಲಿ ನಡೆದು ಹೋಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ವಿಷಯ ಗೊತ್ತಾಗಿಲ್ಲ. ಆದ್ದರಿಂದ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಕಾಲಾವಕಾಶವನ್ನು 2020ರ ಡಿ.31ರವರೆಗೆ ವಿಸ್ತರಿಸಬೇಕು.
ಪ್ರಾಧಿಕಾರಗಳ ವೆಬ್‌ಸೈಟ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಕರಡು ಪ್ರತಿ ಪ್ರಕಟಿಸಲು, ಆಯಾ ರಾಜ್ಯಗಳ ಪ್ರಮುಖ ದಿನ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಇದಕ್ಕೆ ಕೇಂದ್ರ ಪರಿಸರ ಸಚಿವಾಲಯದ ಪರ ವಕೀಲರು ಪ್ರತಿಕ್ರಿಯಿಸಿ 2020ರ ಆ.11ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು. ಆಗ, ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ವ್ಯಾಪಕ ಪ್ರಚಾರ ಮಾಡಲು ಬಗ್ಗೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿತು.