ವಂಚನೆ: ಆಯೇಷಾ ಅಮಿನಾ ಟ್ರಸ್ಟ್‌ನ ಟ್ರಸ್ಟಿ ಸೆರೆ
Team Udayavani, Jan 21, 2022, 1:51 PM IST
ಬೆಂಗಳೂರು: ಟ್ರಸ್ಟ್ ಕಚೇರಿಯಿಂದ ದಾಖಲಾತಿ ಕಳವು ಮಾಡಿದ ಆರೋಪದ ಮೇಲೆ ಆಯೇಷಾ ಅಮಿನಾ ಟ್ರಸ್ಟ್‌ನ ಟ್ರಸ್ಟಿಯನ್ನು ಎಸ್.ಜೆ.ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಟ್ರಸ್ಟ್‌ನ ಕಾರ್ಯದರ್ಶಿ ಡಾ.ಅಹ್ಮದ್ ಶರೀಫ್ ಸಿರಾಜ್ ಎಂಬುವರು ನೀಡಿದ ದೂರಿನ್ವಯ ಟ್ರಸ್ಟಿ ಬಿ.ಎಂ.ಜಾಕೀರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.17ರಂದು ಆಯೇಷಾ ಅಮೀನಾ ಟ್ರಸ್ಟ್ ಕಾರ್ಯದರ್ಶಿ ಡಾ.ಅಹ್ಮದ್ ಶರೀಫ್ ಸಿರಾಜ್ ದೂರು ಸಲ್ಲಿಸಿದ್ದು, ಟ್ರಸ್ಟಿಗಳಾದ ಸುಭಾನ್ ಶರೀಫ್ ಹಾಗೂ ಬಿ.ಎಂ.ಜಾಕೀರ್ ಅವರು ಟ್ರಸ್ಟಿನ ನಿಯಮಗಳನ್ನು ಉಲ್ಲಂ ಸಿ ಟ್ರಸ್ಟ್‌ಗೆ ಸಂಬಂಧಿಸಿದ ಬ್ಯಾಂಕ್‌ನ ಖಾತೆಯಲ್ಲಿ ನಿಯಮ ಬಾಹಿರವಾಗಿ ವ್ಯವಹಾರ ನಡೆಸಿದ್ದಾರೆ. ಜತೆಗೆ, ಟ್ರಸ್ಟ್‌ನ ಮಿನಿಟ್ಸ್ ಪುಸ್ತಕ ಹಾಗೂ ಇತರೆ ದಾಖಲಾತಿಗಳನ್ನು ಟ್ರಸ್ಟ್ ಕಚೇರಿಯಿಂದ ಕಳವು ಮಾಡಿ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಸಲ್ಲಿಸಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಾಕೀರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.