ಪಿಂಚಣಿ ಪಡೆಯಲು “ನಾಳೆ ಬನ್ನಿ”
Team Udayavani, Jan 28, 2022, 10:39 AM IST
ಚಿಂಚೋಳಿ: ತಾಲೂಕಿನ ಗಡಿಪ್ರದೇಶದ ವೃದ್ಧರು, ಅಂಗವಿಕಲರು, ವಿಧವೆಯರಿಗೆ ಸರ್ಕಾರದಿಂದ ಮಂಜೂರಿಯಾಗಿರುವ ಪಿಂಚಣಿ ಹಣವನ್ನು ಸ್ಥಳೀಯ ಅಂಚೆ ಕಚೇರಿಯಲ್ಲಿ ಪಡೆಯಲು ತೊಂದರೆಪಡುವಂತೆ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಸೂರಿ ತಿಳಿಸಿದ್ದಾರೆ.
ಕುಂಚಾವರಂ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ರಾಜ್ಯದ ಗಡಿಪ್ರದೇಶ ಶಿವರಾಮಪುರ, ಶಿವರೆಡ್ಡಿಪಳ್ಳಿ, ಮಗದಂಪುರ, ಪೋಚಾ ವರಂ, ಕುಂಚಾವರಂ, ಲಚಮಸಾಗರ ಗ್ರಾಮಗಳ ವೃದ್ಧರು, ವಿಧವೆಯರು, ಅಂಗವಿಕಲರು ಕಂದಾಯ ಇಲಾಖೆಯಿಂದ ಕೊಡುವ ಪಿಂಚಣಿ ಪಡೆಯಲು ಪ್ರತಿ ತಿಂಗಳು 40ರಿಂದ 50ರೂ. ಖರ್ಚು ಮಾಡಿ ಸುಮಾರು 200 ಜನರು ಕುಂಚಾವರಂ ಅಂಚೆ ಕಚೇರಿಗೆ ಬರುತ್ತಾರೆ. ಆದರೆ ಅಂಚೆ ಸಿಬ್ಬಂದಿಯಿಂದ “ನಾಳೆ ಬನ್ನಿ’ ಎನ್ನುವ ಸಿದ್ಧ ಉತ್ತರ ಮಾತ್ರ ದೊರಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎರಡ್ಮೂರು ತಿಂಗಳ ಪಿಂಚಣಿ ಬಂದಿದ್ದರೂ ಸಿಬ್ಬಂದಿ ಒಂದೇ ತಿಂಗಳ ಪಿಂಚಣಿ ಬಂದಿದೆ ಎಂದು ಹೇಳಿ ಕಳಿಸುತ್ತಿದ್ದಾರೆ. ತಹಶೀಲ್ದಾರರು ಕೂಡಲೇ ಕುಂಚಾವರಂ ಅಂಚೆ ಕಚೇರಿಗೆ ಭೇಟಿ ನೀಡಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು