ಆರೋಗ್ಯಕ್ಕೆ ರೋಗ ನಿರೋಧಕ ಶಕ್ತಿ ಅವಶ್ಯ
Team Udayavani, Jan 17, 2022, 12:00 PM IST
ಶಹಾಬಾದ: ನಾವು ಆರೋಗ್ಯವಾಗಿರಲು ರೋಗನಿರೋಧಕ ಶಕ್ತಿ ಅಗತ್ಯವಾಗಿದ್ದು, ಅದಕ್ಕಾಗಿ ಮಕ್ಕಳು ಹಸಿರು ತರಕಾರಿ, ಹಣ್ಣುಗಳನ್ನು ತಿನ್ನುವ ರೂಢಿಯನ್ನು ಹಾಕಿಕೊಳ್ಳಬೇಕೆಂದು ಆರ್‌ಬಿಎಸ್‌ಕೆ ವೈದ್ಯ ಡಾ| ಮಹ್ಮದ್ ಹೇಳಿದರು.
ನಗರದ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಅವರು ಮಾತನಾಡಿದರು.
ಮಕ್ಕಳು ಆದಷ್ಟು ಹೊರಗಿನ ತಿಂಡಿಗಳಾದ ಎಣ್ಣೆಯಲ್ಲಿ ಕರಿದ ಪದಾರ್ಥ, ಪಾಕೇಟ್ ಪದಾರ್ಥ ಹಾಗೂ ಲಘು ತಿಂಡಿಗಳಿಗೆ ಮೊರೆ ಹೋಗದೇ ಮನೆಯಲ್ಲಿ ತಯಾರು ಮಾಡಿದ ಆಹಾರ ಸೇವಿಸಬೇಕು. ಅದರಲ್ಲೂ ಮೊಳಕೆ ಬಂದ ಬೇಳೆ ಕಾಳು, ಬಾಳೆ ಹಣ್ಣು, ಬೆಳ್ಳುಳ್ಳಿ, ಈರುಳ್ಳಿ ಮೊದಲಾದವುಗಳನ್ನು ಸೇವಿಸುವುದರಿಂದ ಅದರಲ್ಲಿರುವ ಜೀವ ಸತ್ವಗಳು ದೇಹದಲ್ಲಿ ಸೇರ್ಪಡೆಯಾಗಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.
ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವುದಲ್ಲದೇ, ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಕೈ ತೊಳೆದುಕೊಳ್ಳಬೇಕ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಿಸಿ ನೀರು ಕುಡಿಯುತ್ತಿರಬೇಕು. ನೆಗಡಿ, ಜ್ವರ, ಕೆಮ್ಮು ಕಂಡು ಬಂದರೆ ಕೂಡಲೇ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕೆಂದು ಹೇಳಿದರು.
ಮುಖ್ಯಶಿಕ್ಷಕರಾದ ದಮಯಂತಿ ಸೂರ್ಯವಂಶಿ, ಬಾಬಾ ಸಾಹೇಬ ಸಾಳುಂಕೆ, ಮಹೇಶ್ವರಿ ಗುಳಿಗಿ, ವಿಜಯಲಕ್ಷ್ಮೀ ವೆಂಕಟೇಶ, ರಾಜೇಶ್ವರಿ ಎಂ., ಆರ್‌ಬಿಎಸ್‌ಕೆ ತಂಡದ ಶಿವಲೀಲಾ ಇತರರು ಇದ್ದರು. ಮಕ್ಕಳಲ್ಲಿ ಆರೋಗ್ಯದಲ್ಲಿ ನ್ಯೂನತೆ ಕಂಡು ಬಂದವರಿಗೆ ನಗರದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಗಾಗಬೇಕೆಂದು ಲಿಖೀತ ಪತ್ರ ನೀಡಿದರು.