ರಾಜ್ಯ ಕೃಷಿ ಕಾಯ್ದೆ ಹಿಂಪಡೆಯಲು ಜಾಥಾ
Team Udayavani, Jan 24, 2022, 11:56 AM IST
ಕಲಬುರಗಿ: ರಾಜ್ಯ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಸಿಟಿಜನ್ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾ ಮೈತ್ರಿ, ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಫೆಬ್ರವರಿಯಲ್ಲಿ ರಾಜ್ಯಾದ್ಯಂತ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಸಂಚಾಲಕ ಎಸ್.ಆರ್. ಹಿರೇಮಠ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ರೈತರ ಹೋರಾಟಕ್ಕೆ ಮಣಿದು ರದ್ದು ಪಡಿಸಿದೆ. ಆದರೆ, ರಾಜ್ಯ ಸರ್ಕಾರ ಈ ಕಾಯ್ದೆಗಳನ್ನು ಇನ್ನೂ ಹಿಂದಕ್ಕೆ ಪಡೆದಿಲ್ಲ. ಹೀಗಾಗಿ ಬೀದರ್ ಜಿಲ್ಲೆಯ ಬಸವ ಕಲ್ಯಾಣ, ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದಿಂದ ಬೆಂಗಳೂರಿನ ವರೆಗೆ ಜಾಥಾ ನಡೆಸಲಾಗುವುದು. ಜತೆಗೆ ಬೆಳಗಾವಿ, ಚಿಕ್ಕಮಗಳೂರು, ಕೋಲಾರ ಕಡೆಯಿಂದ ನಾಲ್ಕು ಉಪ ಜಾಥಾಗಳು ಬಂದು ಇದರಲ್ಲಿ ಸೇರಲಿವೆ ಎಂದರು.
ಈ ಹಿಂದೆ ಉಳುವವನೇ ಭೂಮಿಯ ಒಡೆಯನಾಗಬೇಕೆಂಬ ಉದ್ದೇಶದಿಂದ ಭೂ ಸುಧಾರಣೆ ತರಲಾಗಿತ್ತು. ಈಗ ಅದೇ ಕಾಯ್ದೆಗೆ ತಿದ್ದುಪಡಿ ತಂದು ಉದ್ಯಮಿಗಳಿಗೆ ಲಾಭ ಮಾಡಿ ರೈತರಿಗೆ ಗುಲಾಮರನ್ನಾಗಿ ಮಾಡಬೇಕು. ಉಳ್ಳವನೇ ಭೂಮಿ ಒಡೆಯನನ್ನು ಮಾಡುವ ಹುನ್ನಾರ ನಡೆದಿದೆ. ಇಂತಹ ಜನ, ರೈತ ವಿರೋಧಿಗಳ ಕಾಯ್ದೆಗಳನ್ನು ಕಿತ್ತೆಸೆಯಬೇಕಿದ್ದು, ದೆಹಲಿಯಲ್ಲಿ ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಐತಿಹಾಸಿಕ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದು ಕಾಯ್ದೆಗಳನ್ನು ಹಿಂಪಡೆದಿದೆ ಎಂದರು.
ಇದೇ ಮಾರ್ಗದಲ್ಲಿ ಕರ್ನಾಟಕ ಭೂಸುಧಾರಣೆ ಕಾಯ್ದೆ-2020, ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯ್ದೆ-2020, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ-ಅನುಕೂಲ) ಕಾಯ್ದೆ-2020, ರೈತರ ಕೃಷಿ (ಸಶಕ್ತಿಕರಣ ಮತ್ತು ಸಂರಕ್ಷಣೆ) ಸೇವೆಗಳು ಮತ್ತು ಬೆಲೆ ಭರವಸೆ ಒಪ್ಪಂದ ಕಾಯ್ದೆ-2020 ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ-2020 ರದ್ದುಗೊಳಿಸಬೇಕೆಂದು ಈ ಹೋರಾಟ ನಡೆಯಲಿದೆ. ರಾಜ್ಯ ಸರ್ಕಾರದ ಬಜೆಟ್ ಅಧಿವೇಶನದ ವೇಳೆಗೆ ಬೆಂಗಳೂರಿಗೆ ಜಾಥಾ ತಲುವಂತೆ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಪ್ರಧಾನಿ ಮೌನ ಅಪಾಯಕಾರಿ
ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಮುಸ್ಲಿಂರ ನರಮೇಧಕ್ಕೆ ಕರೆ ನೀಡಿದ್ದು ಖಂಡನೀಯವಾಗಿದೆ. ಮುಸ್ಲಿಂರ ರುದ್ಧ ಆಯುಧಗಳ ಬಳಕೆಗೆ ಬಹಿರಂಗ ಕರೆ ನೀಡಿರುವುದು ಭಾರತೀಯ ಸಂಸ್ಕೃತಿಗೆ ಕಪ್ಪು ಚುಕ್ಕೆಯಾಗಿದೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಪ್ರಧಾನಿ ಮೋದಿ ಮೌನ ವಹಿಸಿದ್ದು ಸರಿಯಲ್ಲ. ಅದರಲ್ಲೂ ಪ್ರಧಾನಿ ಮೌನ ಅತ್ಯಂತ ಅಪಾಯಕಾರಿ ಎಂದು ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಮುಖರಾದ ಆರ್.ಕೆ.ಹುಡಗಿ, ಅರ್ಜುನ ಭದ್ರೆ, ಉಮಾಕಾಂತ ಪಾಟೀಲ, ಖಾಜಾ ಅಸ್ಲಾಂ ಅಹ್ಮದ್ ಇದ್ದರು.
ರೈತರ ವಿರೋಧಿಯಾದ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು. ರೈತರ ಹಿತರಕ್ಷಣೆ ಕಾಯಲು ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಲೆ ಘೋಷಣೆ (ಎಂಎಸ್‌ಪಿ) ಕಾಯ್ದೆ ಜಾರಿಗೆ ತರಬೇಕು. -ಎಸ್.ಆರ್.ಹಿರೇಮಠ ಸಾಮಾಜಿಕ ಹೋರಾಟಗಾರ