ಜೇವರ್ಗಿ: ಸ್ಮಶಾನಕ್ಕೆ ತೆರಳಲು ರಸ್ತೆ ಬಂದ್
Team Udayavani, May 17, 2022, 2:39 PM IST
ಜೇವರ್ಗಿ: ಅಂತ್ಯ ಸಂಸ್ಕಾರಕ್ಕೆ ತೆರಳಲು ರಸ್ತೆ ಬಂದ್ ಮಾಡಿದ ಸೋಮವಾರ ಶವ ಸಮೇತ ಪಟ್ಟಣದ ಅಖಂಡೇಶ್ವರ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಹಿಂದುಳಿದ ವರ್ಗಗಳ ಮೃತರ ಅಂತ್ಯ ಸಂಸ್ಕಾರ ನಡೆಸಲು ಭೂಮಿ ನೀಡಿದ ಸರ್ಕಾರ ಸ್ಮಶಾನಕ್ಕೆ ತೆರಳಲು ಪಕ್ಕದ ಭೂಮಿಯೊಂದರ ಮಾಲೀಕರು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಅಂತ್ಯ ಸಂಸ್ಕಾರಕ್ಕೆ ತೆರಳಲು ಗೊಂದಲ ಉಂಟಾಗಿ ಅಂತ್ಯ ಸಂಸ್ಕಾರಕ್ಕೆ ಬಂದ ಜನ ಶವ ಸಮೇತ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ವಿನಯಕುಮಾರ ಪಾಟೀಲ, ಪಿಎಸ್‌ಐ ಸಂಗಮೇಶ ಅಂಗಡಿ ಮಧ್ಯಸ್ಥಿಕೆಯಲ್ಲಿ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ನಂತರ ತಹಶೀಲ್ದಾರ್ ವಿನಯಕುಮಾರ ಪಾಟೀಲ ಖುದ್ದು ಸ್ಮಶಾನಕ್ಕೆ ತೆರಳಿ ಮೃತರ ಅಂತ್ಯ ಕ್ರಿಯೆಗೆ ನೆರವಾದರು.
ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಈಶ್ವರ ಹಿಪ್ಪರಗಿ, ಪ್ರಮುಖರಾದ ಮಲ್ಲಿಕಾರ್ಜುನ ದಿನ್ನಿ, ಹಣಮಂತ ಶಾಹಬಾದಕರ, ಚಿದಾನಂದ ಬಾವಿಮನಿ, ಭೀಮರಾಯ ತಳವಾರ, ರಾಜು ತಳವಾರ, ಚಂದ್ರು ತಳವಾರ ಮತ್ತಿತರರು ಪಾಲ್ಗೊಂಡಿದ್ದರು.