ಇಎಸ್‌ಐ ಆಹಾರ ಪರೀಕ್ಷಿಸಿದ ಅಧಿಕಾರಿ
Team Udayavani, Apr 27, 2020, 10:52 AM IST
ಕಲಬುರಗಿ: ಕೋವಿಡ್ ಸೋಂಕಿತರಿಗೆ ಪೂರೈಸಲು ಸಿದ್ಧಪಡಿಸಿರುವ ಆಹಾರದ ಪೊಟ್ಟಣಗಳು.
ಕಲಬುರಗಿ: ಕೋವಿಡ್ ಸೋಂಕಿತರು ಹಾಗೂ ಶಂಕಿತರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಗರದ ಇಎಸ್‌ಐ ಆಸ್ಪತ್ರೆಗೆ ಬೆಂಗಳೂರಿನ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಭೇಟಿ ಕೊಟ್ಟು ಆಹಾರ ಪರಿಶೀಲಿಸಿದ್ದಾರೆ.
ಕೋವಿಡ್ ರೋಗಿಗಳು ಮತ್ತು ಶಂಕಿತರನ್ನು ದಾಖಲಿಸಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಸ್ವತ್ಛತೆ ಇಲ್ಲ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ರೋಗಿಗಳಿಗೆ ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ…ಹೀಗೆ ಅನೇಕ ಆರೋಪಗಳು ಕೇಳಿ ಬರುತ್ತಿವೆ. ರೋಗಿಗಳು ತಮ್ಮ ಸಂಬಂಧಿಕರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಅಲ್ಲಿನ ಪರಿಸ್ಥಿತಿಯನ್ನು ವಿವರಿಸುವ ಆಡಿಯೋ ಕ್ಲಿಪ್‌ಗ್ಳು ಸಹ ಹರಿದಾಡುತ್ತಿವೆ. ಮೇಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರಿಗೆ ಇಎಸ್‌ಐ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಹೀಗಾಗಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯ ವ್ಯವಸ್ಥೆಯನ್ನು ಅವಲೋಕಿಸಲು ಅಧಿಕಾರಿಯನ್ನು ರವಾನಿಸಿತ್ತು. ಬೆಂಗಳೂರಿನ ಡಿಎಚ್‌ಒ ಡಾ.ಓಂಪ್ರಕಾಶ ಪಾಟೀಲ ಇಲ್ಲಿಗೆ ಬಂದು ಪರಿಶೀಲಿಸಿ ಹೋಗಿದ್ದಾರೆ. ಈ ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಚಿಸಿರುವ “ಡಿಐಪಿಆರ್ ಕೋವಿಡ್-19′ ತಂಡದ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಸಾವಿರ ಜನರಿಗೆ ಊಟ: ಕೋವಿಡ್ ಸೋಂಕಿತರಿಗೆ ಇಎಸ್‌ಐ ಮತ್ತು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 27 ಜನ ಕೋವಿಡ್ ಪೀಡಿತರಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಂಕಿತರನ್ನೂ ಐಸೋಲೇಷನ್ ವಾಡ್‌ನಲ್ಲಿ ಚಿಕಿತ್ಸೆ ಕೊಡಲಾಗಿದೆ. ಒಟ್ಟು 241 ಜನರು ಐಸೋಲೇಷನ್‌ನಲ್ಲಿ ಇದ್ದಾರೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ಎಲ್ಲರಿಗೂ ಒಂದೇ ರೀತಿಯಾದ ಆಹಾರ ಇರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಾನಿಗಳಿಂದ ಸಹಾಯ: ರೋಗಿಗಳಿಗೆ ಆರಂಭದಿಂದ ಆರೋಗ್ಯ ಇಲಾಖೆಯಿಂದಲೇ ವಿತರಿಸಲಾಗುತ್ತಿತ್ತು. ಈ ನಡುವೆ ಇಬ್ಬರು ದಾನಿಗಳು ಆಹಾರ ಪೂರೈಸಲು ಮುಂದೆ ಬಂದಿದ್ದಾರೆ. ಕಳೆದ 10-12 ದಿನಗಳಿಂದ ದಾನಿಗಳೇ ನೀಡಿದ ಆಹಾರ ವಿತರಿಸಲಾಗುತ್ತಿದೆ. ಆಹಾರದ ಶುಚಿತ್ವ ಪರಿಶೀಲಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿ ದಾನಿಗಳು ಸಿದ್ಧಪಡಿಸಿ ಊಟ ಪಡೆದುಕೊಂಡು ಬರುತ್ತಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಆಹಾರವನ್ನು ಪೊಟ್ಟಣಗಳಲ್ಲಿ ತುಂಬಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳು ಮತ್ತು ಆರೋಗ್ಯ ಸಿಬ್ಬಂದಿಗೆ ವಿತರಿಸುತ್ತಾರೆ ಎಂದು ಮತ್ತೊಬ್ಬ ಅಧಿಕಾರಿ ಖಚಿತ ಪಡಿಸಿದ್ದಾರೆ.