ಕ್ವಾರಂಟೈನ್‌ನಲ್ಲಿ 2,446 ಜನ
Team Udayavani, Jun 21, 2020, 10:54 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕಲಬುರಗಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದ್ದು, ಸದ್ಯ 2,446 ಜನರು ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಸಡಿಲಿಕೆ ನಂತರ ವಿವಿಧ ರಾಜ್ಯಗಳಿಂದ ಇದುವರೆಗೆ 43,127 ಜನರು ಆಗಮಿಸಿದ್ದಾರೆ. ಈ ಪೈಕಿ 40,680 ಜನರನ್ನು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸುವವರ ಸಂಖ್ಯೆ ಸದ್ಯಕ್ಕೆ ಕಡಿಮೆಯಾಗಿದೆ. ಹೊರ ಕಡೆಯಿಂದ ಯಾರೇ ಬಂದರೂ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ವಲಸಿಗರಿಂದಲೇ ಜಿಲ್ಲೆಗೆ ಕೋವಿಡ್ ಕಾಲಿಟ್ಟಿದ್ದರಿಂದ ಬರುವಂತಹವರ ಮೇಲೆ ನಿರಂತರ ನಿಗಾವಹಿಸುವ ಕಾರ್ಯ ಮುಂದುವರಿದಿದೆ. ಹಾಗೆಯೇ ಗಂಟಲು ದ್ರಾವಣ ಮಾದರಿಯನ್ನೂ ಸಂಗ್ರಹಿಸಲಾಗುತ್ತಿದೆ. ಪ್ರಯೋಗಾಲಯದಿಂದ ವರದಿ ಹೊರ ಬರುವವರೆಗೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವಂತೆಯೂ ಮನವೊಲಿಸಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ಪಾಸಿಟಿವ್ ಕಂಡು ಬಂದ ವ್ಯಕ್ತಿ ವಾಸವಿರುವ ಇಡೀ ವಾರ್ಡ್ ಅಥವಾ ಗ್ರಾಮವನ್ನೇ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗುತ್ತಿತ್ತು. ಆದರೆ, ಸರ್ಕಾರ ಈಗ ನಿಯಮ ಮಾರ್ಪಾಡು ಮಾಡಿದ್ದು, ಸೋಂಕಿತರ ವ್ಯಕ್ತಿ ವಾಸಿರುವ 100 ಮೀಟರ್ ವ್ಯಾಪ್ತಿಯನ್ನು ಮಾತ್ರ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗುತ್ತದೆ. ಸುತ್ತಮುತ್ತಲು ಯಾವುದೇ ಮನೆಗಳು ಇಲ್ಲದೇ ಒಂಟಿ ಮನೆ ಇದ್ದರೆ ಅದನ್ನು ಮಾತ್ರ ಆ ಮನೆ ಮಾತ್ರ ಸೀಲ್‌ಡೌನ್ ಮಾಡಲಾಗುತ್ತದೆ. ಒಂದು ವೇಳೆ ಒಂದೇ ಗ್ರಾಮದಲ್ಲಿ 20ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ, ಗ್ರಾಮವನ್ನು ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.