ಶೋಷಿತರ ಬೆಳಕಾಗಿ ಉದಯಿಸಿದ ಮಹಾಪುರುಷ

Team Udayavani, Sep 13, 2019, 5:25 AM IST

ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು.

ಸಮಾಜದಲ್ಲಿ ಆಳವಾಗಿ ಬೇರೂರಿರುವ ಯಾವುದೇ ಅನಿಷ್ಟಗಳನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ. ಒಬ್ಬ ಶೋಷಣೆಗೆ ಒಳಗಾದ ವ್ಯಕ್ತಿ ಮತ್ತು ಆತನ ಮನಸ್ಥಿತಿಯನ್ನು ಅರಿಯುವುದು ಹಾಗೂ ಶೋಷಿಸುವ ವ್ಯಕ್ತಿಯಲ್ಲಿನ ದರ್ಪ, ಅಹಂಕಾರಗಳ ವಿರುದ್ಧ ಶೋಷಿತ ವರ್ಗವನ್ನು ಸಿದ್ಧಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಜಾತಿ ಎನ್ನುವುದು ಮೈಗಂಟಿದ ಚರ್ಮವಾಗಿದ್ದ ಅಂದಿನ ಕಾಲಘಟ್ಟದಲ್ಲಿ, ದೇವಸ್ಥಾನ ಪ್ರವೇಶ ಮತ್ತು ಶಿಕ್ಷಣ ಎಂಬುದು ಮೇಲ್ವರ್ಗದ ಸ್ವತ್ತು ಎಂದು ನಂಬಿದ ಮತ್ತು ಬಲವಂತವಾಗಿ ನಂಬಿಸಲ್ಪಟ್ಟ ಆ ಸಮಯದಲ್ಲಿ ‘ನಾಣು’ ಎಂದು ಕರೆಯಲ್ಪಡುತ್ತಿದ್ದ ನಾರಾಯಣ ಗುರುಗಳು ಹುಟ್ಟಿದರು.

ಪ್ರತಿಯೊಂದು ದಮನಿತ ಸಮುದಾಯವು ಸೂಕ್ತವಾದ ಶಿಕ್ಷಣವನ್ನು ಪಡೆದರೆ ಮತ್ತು ಆ ಮೂಲಕ ಸಮಾಜವು ಮೌಡ್ಯಗಳಿಂದ ಮುಕ್ತವಾಗ ಬೇಕಾದರೆ ಹಾಗೂ ಇವುಗಳೆಲ್ಲದರ ಮೂಲಕ ಆತ ಹೊಸ ಆಲೋಚನೆಗಳಿಂದ ಕೂಡಿದ ಸ್ವತಂತ್ರ ವ್ಯಕ್ತಿ ಎನಿಸಿಕೊಳ್ಳಬೇಕಾದರೆ ಅದು ಸಮಯೋಚಿತ ಶಿಕ್ಷಣದಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ‘ಶಿಕ್ಷಣದಿಂದ ಸ್ವತಂತ್ರರಾಗಿರಿ’ ಎಂಬ ಎಚ್ಚರಿಕೆ ನೀಡಿ ಹಲವಾರು ಕೆಳ ಜಾತಿಯವರಿಗೆ ವೇದಾಭ್ಯಾಸ ಮಾಡಿಸಿದವರು ನಾರಾಯಣ ಗುರುಗಳು.

ಹೀಗೆ ಶೈಕ್ಷಣಿಕ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಗುರುಗಳು ಕೆಳಜಾತಿಯವರು ಅದರಲ್ಲೂ ಈಳವರಿಗಾಗಿ (ಬಿಲ್ಲವ ಜನಾಂಗ) ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಎಲ್ಲಾ ಧರ್ಮ ಪಂಗಡದ ಮಕ್ಕಳಿಗೆ ಸಮಾನ ಶಿಕ್ಷಣ ನೀಡಿದಾಗ ಮಾತ್ರ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡು ವರ್ಗ ಭೇದವಿಲ್ಲದ ಸಮಾಜ ಸೃಷ್ಟಿಯಾಗಬಲ್ಲದು ಎಂಬ ಸೂಕ್ಷ್ಮ ಜ್ಞಾನ ಅವರಿಗಿತ್ತು.

‘ಸಂಘಟನೆಯಿಂದ ಬಲಿಷ್ಠರಾಗಿರಿ’ ಎಂಬ ನಾರಾಯಣ ಗುರುಗಳ ಧ್ಯೇಯ ವಾಕ್ಯದಂತೆ ಒಬ್ಬ ವ್ಯಕ್ತಿ ಯಾವುದೇ ಸಹಕಾರವಿಲ್ಲದೆ ಬೆಳೆದಾಗ ಆತನನ್ನು ಹೇಗೆ ಬೇಕಾದರೂ ಲಯಗೊಳಿಸಬಹುದು. ಆದರೆ ಆ ವ್ಯಕ್ತಿ ಒಗ್ಗಟ್ಟಿನಿಂದ ಇದ್ದರೆ ಯಾವ ಶಕ್ತಿಯೂ ಆತನನ್ನು ಮುಟ್ಟಲಾರದು. ತಾನು ಪಡೆಯಬೇಕಾದ ತನ್ನ ಹಕ್ಕಿನ ರಕ್ಷಣೆ ಮಾಡುವ ಮತ್ತು ಆ ಮೂಲಕ ತನ್ನ ಬೇಡಿಕೆ ಏನಿದೆಯೋ ಅದನ್ನು ಸರಕಾರದ ಮೂಲಕ ಪಡೆದುಕೊಳ್ಳುವ ಹಕ್ಕು ಸಂಘಟನೆಯಿಂದ ನಿರಾಯಾಸವಾಗಿ ಬರಬಹುದು. ಹಾಗಾಗಿಯೇ ಗುರುಗಳು ಸಂಘಟನೆಯ ಮುಖಾಂತರವೇ ಕೃಷಿ, ಕೈಗಾರಿಕೆ, ಉದ್ದಿಮೆ, ತಾಂತ್ರಿಕ ಶಿಕ್ಷಣ ಮೊದಲಾದವುಗಳಿಗೆ ಹೆಚ್ಚಿನ ಮಹತ್ವ ನೀಡಿದರು. ಸ್ವಾತಂತ್ರ್ಯವು ಶಿಕ್ಷಣದಿಂದ ದೊರೆಯುತ್ತದೆ.ಸಂಘಟನೆ ಯಿಂದ ಶಕ್ತಿ ದೊರೆಯುತ್ತದೆ ಎಂದರು. ಇದು ಎಲ್ಲಾ ಜಾತಿ ಸಮುದಾಯಗಳಿಗೆ ಸಲ್ಲುವ ಸಾರ್ವಕಾಲಿಕ ಸತ್ಯ.

ಅಂದಿನ ಸಮಾಜದಲ್ಲಿ ಇದ್ದ ಮತ್ತೂಂದು ಪಿಡುಗು ಎಂದರೆ ದೇವಸ್ಥಾನ ಪ್ರವೇಶ ನಿಷೇಧ. ಬರೇ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಮತ್ತು ಇಂತಹ ಕಡೆಗಳಲ್ಲೆಲ್ಲಾ ಕೆಳ ವರ್ಗಗಳನ್ನು ತೀರಾ ನಿಕೃಷ್ಟವಾಗಿ ನಡೆಸಿಕೊಳ್ಳುವ ಪರಿಯನ್ನು ಗಮನಿಸಿದ ನಾರಾಯಣ ಗುರುಗಳು ದೇವರ ಭಯ ಎಂಬುದು ಜ್ಞಾನದ ವಿಕಾಸಕ್ಕೆ ಕಾರಣವಾಗ ಬೇಕು.ಪರಿಶುದ್ಧವಾದ ಮನಸ್ಸಿನಿಂದ ಮಾಡಿದ ಭಕ್ತಿ ಭಗವಂತನನ್ನು ತಲುಪಬಲ್ಲದು.ಅದಕ್ಕೆ ಮೇಲ್ವರ್ಗದ ಮತ್ತು ಮೇಲ್ವರ್ಗದವರಿಂದ ಬಂಧಿಸಲ್ಪಟ್ಟಿರುವ ದೇವರೇ ಬೇಕಾಗಿಲ್ಲ ಮತ್ತು ಅಲ್ಲಿಗೆ ಹೋಗಬೇಕಾಗಿಯೂ ಇಲ್ಲ ಎಂದು ಸ್ವತಃ ತಾವೇ ದೇವಾಲ ಯವನ್ನು ಸ್ಥಾಪಿಸುವ ಮೂಲಕ ಭಕ್ತಿ ಚಳವಳಿಗೆ ನಾಂದಿ ಹಾಡಿದರು.ಅಲ್ಲದೆ ಕೆಲವು ದೇಗುಲಗಳಲ್ಲಿ ‘ಸತ್ಯ, ಕರ್ತವ್ಯ, ದಯೆ ಮತ್ತು ಪ್ರೀತಿ’ ಎಂದು ಬರೆಸುವ ಮುಖಾಂತರ ಸ್ವತಃ ತಾವೇ ಗುರುವಾಗಿ ನಿಂತು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಪರಿಕಲ್ಪನೆ ಮೂಡಿಸಿ ಅಂದಿನಿಂದ ಇಂದಿನವರೆಗೂ ಒಬ್ಬ ಗುರುವರೇಣ್ಯರಾಗಿ, ಸ್ವಾಮಿಯಾಗಿ, ದೇವರಾಗಿ, ಅದ್ಭುತ ಶಕ್ತಿಯಾಗಿ ಕಾಯುತ್ತಾ ಬಂದವರು.

ಬದುಕಿನಲ್ಲಿ ದುಃಖರಹಿತರಾಗಿ ಬಾಳಬೇಕಾದರೆ ದೇಶ ಸೇವೆ ಮತ್ತು ಈಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಹಾಗೆಯೆ ಮೋಕ್ಷವನ್ನು ಕಂಡುಕೊಳ್ಳಬೇಕು ಎಂದು ಬೋಧಿಸಿರುವ ಉಪದೇಶಗಳ ಗಣಿಯಾಗಿರುವ ನಾರಾಯಣ ಗುರುಗಳು ನಮ್ಮೊಂದಿಗೆ ಇಲ್ಲವಾದರೂ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸರಳ, ನಿಷ್ಕಲ್ಮಶ ವ್ಯಕ್ತಿತ್ವ ಬೆಳೆಸಿಕೊಂಡು ಸುಂದರವಾದ ಜೀವನ ನಡೆಸೋಣ.ಅವರ ಮಾನವತಾವಾದವನ್ನು ಮರೆಯದಿರೋಣ.

(ಇಂದು ನಾರಾಯಣ ಗುರುಗಳ ಜಯಂತಿ)

ವಾಸಂತಿ ಅಂಬಲಪಾಡಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಾಕು ಸಾಕಪ್ಪ ಬದುಕಿದ್ದು ಎನ್ನುವ ಇರಾದೆ ಜೀವನದಲ್ಲಿ ಎಲ್ಲರಿಗೂ ಒಮ್ಮೊಮ್ಮೆ ಇದ್ದಿದ್ದೆ. ಅದು ಬ್ರಾಂತಿಯೂ ಅಲ್ಲ, ದೋಷವೂ ಅಲ್ಲ. ಎರಗಿರುವ ಸಂಕಷ್ಟದಿಂದ ಹೊರಬರಲಾದೆಂಬ...

  • ಹಿರಿಯ ಜೀವಿಗಳೆಡೆಗೆ ತಾತ್ಸಾರ ಸರ್ವಥಾಸಲ್ಲ. ವೃದ್ಧರನ್ನು ಪ್ರೀತಿ- ಗೌರವಗಳಿಂದ ಕಾಣುವುದು ಹಾಗೂ ಅವರು ಸದಾ ಚಟುವಟಿಕೆಯಿಂದ ಇರುವಂತೆ ನೋಡಿ ಕೊಳ್ಳುವುದು,...

  • ಪಂಡಿತ್‌ ದೀನ ದಯಾಳ್‌ ಅವ ರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಒಬ್ಬ ಮಹಾನ್‌ ವ್ಯಕ್ತಿಯಾಗಿದ್ದರು. ಹೆಸರಿಗೆ ತಕ್ಕಂತೆ ಯೇ ಅವರ ಚಿಂತನೆಯೂ ಇತ್ತು. ವ್ಯಕ್ತಿ...

  • ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ...

  • ಪಶ್ಚಿಮ ಬಂಗಾಳದ ರಾನಾಘಾಟ್‌ ರೈಲ್ವೇ ಸ್ಟೇಶನ್‌ನ ಪ್ಲಾಟ್‌ಫಾರಂಗಳಲ್ಲಿ ಹಾಡುತ್ತಿದ್ದ ಈಕೆ ಇಂದು ಕೋಟ್ಯಂತರ ಮಂದಿಯ ಮೊಬೈಲುಗಳಲ್ಲಿ ಗುನುಗುತ್ತಿದ್ದಾರೆ. ಅಷ್ಟೇ...

ಹೊಸ ಸೇರ್ಪಡೆ