17 ಅನರ್ಹ ಶಾಸಕರಿಗೆ ಅತಂತ್ರತೆ ಆತಂಕ

Team Udayavani, Aug 14, 2019, 3:08 AM IST

ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬರುವ ಮೊದಲು ರಾಜಕೀಯ ಸುನಾಮಿ ಬೀಸಿ, ಮೈತ್ರಿ ಸರ್ಕಾರ ಪತನಗೊಂಡು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇತ್ತ ಕಡೆ ಮೈತ್ರಿ ಸರ್ಕಾರ ಉರುಳಿಸಲು ಬಂಡಾಯ ಸಾರಿದ್ದ 17 ಅನರ್ಹ ಶಾಸಕರು ಸದ್ಯದ ಮಟ್ಟಿಗೆ ದಿಕ್ಕು ಕಾಣದಂತಾಗಿದ್ದಾರೆ. 17 ಶಾಸಕರು ಹಠಕ್ಕೆ ಬಿದ್ದು ಸರ್ಕಾರ ಉರುಳಿಸಿದ ಕಾರಣಕ್ಕೆ ಸ್ಪೀಕರ್‌ ಆದೇಶದ ಬಳಿಕ ಅನರ್ಹರಾಗಿ ಅತಂತ್ರರಾಗಿದ್ದಾರೆ. ಜತೆಗೆ ತಮ್ಮ ಕ್ಷೇತ್ರಗಳಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರ ರಕ್ಷಣೆಗೂ ನಿಲ್ಲದಂತಹ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.

ಸ್ಪೀಕರ್‌ ರಮೇಶ್‌ ಕುಮಾರ್‌ ತಮ್ಮನ್ನು ಅನರ್ಹಗೊಳಿಸಿರುವ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿರುವ ಅನರ್ಹ ಶಾಸಕರಿಗೆ ಮಂಗಳವಾರ ಸುಪ್ರೀಂ ಕೋರ್ಟ್‌ನಿಂದ ಬಂದ ಸೂಚನೆ ಮತ್ತಷ್ಟು ಗೊಂದಲ ಮೂಡಿಸಿದೆ. ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ತಮ್ಮನ್ನು ಅನರ್ಹಗೊಳಿಸಿರುವ ಆದೇಶವನ್ನು ತಡೆ ಹಿಡಿಯುವ ಕುರಿತು ತಮ್ಮ ಪ್ರಕರಣವನ್ನು ಶೀಘ್ರ ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮಾಡಿಕೊಂಡ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಬರದಿರುವುದು ಅತೃಪ್ತ ಶಾಸಕರ ಆತಂಕಕ್ಕೆ ಕಾರಣವಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೋಗೋಯಿ ಅವರು ಅಯೋಧ್ಯೆ ವಿವಾದದ ಪ್ರಕರಣದ ವಿಚಾರಣೆ ನಡೆಸುತ್ತಿರುವುದರಿಂದ ಅನರ್ಹ ಶಾಸಕರು ಅರುಣ್‌ ಮಿಶ್ರಾ ನೇತೃತ್ವದ ಪೀಠದ ಮುಂದೆ ಬೇಗ ವಿಚಾರಣೆಗೆ ತೆಗೆದುಕೊಳ್ಳುವಂತೆ ಮಾಡಿಕೊಂಡ ಮನವಿಗೆ “ಈ ಬಗ್ಗೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ನೋಡಿಕೊಳ್ಳುತ್ತಾರೆ’ ಎಂದು ನ್ಯಾಯಮೂರ್ತಿಗಳು ಹೇಳಿರುವುದರಿಂದ ಪ್ರಕರಣ ಶೀಘ್ರ ಇತ್ಯರ್ಥವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸುಪ್ರೀಂಕೋರ್ಟ್‌ನ ಸೂಚನೆಯಿಂದ ಅನರ್ಹ ಶಾಸಕರು ಮುಂದೇನು ಎನ್ನುವಂತಾಗಿದ್ದು, ಬಂಡಾಯ ಸಾರುವ ಸಂದರ್ಭದಲ್ಲಿ ಮುಂದಿನ ಕಾನೂನು ಹೋರಾಟಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿರುವ ಅನರ್ಹ ಶಾಸಕರು ಬಿಜೆಪಿ ನಾಯಕರ ಸಲಹೆಯಂತೆಯೇ ನಡೆದುಕೊಂಡಿದ್ದರು ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ನ್ಯಾಯವಾದಿಗಳ ಧೈರ್ಯ: ಅನರ್ಹ ಶಾಸಕರ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಶಾಸಕರು ಸದನಕ್ಕೆ ಹಾಜರಾಗದಂತೆ ಒತ್ತಡ ಹೇರಬಾರದು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಸೂಚನೆಯೇ ಅವರ ರಕ್ಷಣೆಗೆ ಇರುವ ಪ್ರಮುಖ ಅಸ್ತ್ರವಾಗಿದ್ದು, ಸ್ಪೀಕರ್‌ ರಮೇಶ್‌ಕುಮಾರ್‌ ಸುಪ್ರೀಂ ಕೋರ್ಟ್‌ ನಿರ್ದೇಶನ ಉಲ್ಲಂ ಸಿದ್ದಾರೆ ಎನ್ನುವ ವಾದ ಬಲವಾಗಿರುವುದರಿಂದ ಈ ಪ್ರಕರಣದಲ್ಲಿ ಅನರ್ಹತೆ ಪ್ರಕರಣ ಒಂದು ತಿಂಗಳಲ್ಲಿ ಇತ್ಯರ್ಥವಾಗುತ್ತದೆ ಎನ್ನುವ ವಿಶ್ವಾಸವನ್ನು ಅನರ್ಹ ಶಾಸಕರ ಪರವಾಗಿ ವಾದ ಮಾಡುತ್ತಿರುವ ನ್ಯಾಯವಾದಿಗಳು ಭರವಸೆ ನೀಡುತ್ತಿದ್ದಾರೆಂದು ಹೇಳಲಾಗುತ್ತಿದೆ.

ಆದರೆ, ಅನರ್ಹ ಶಾಸಕರ ಪ್ರಕರಣದಲ್ಲಿ ಯಾವುದೇ ತೀರ್ಪು ನೀಡುವ ಮೊದಲು ತಮ್ಮ ಅಭಿಪ್ರಾಯವನ್ನೂ ಕೇಳಬೇಕೆಂದು ಕೆಪಿಸಿಸಿ ಅಧ್ಯಕ್ಷರು ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನಲ್ಲಿ ಕೆವಿಯೆಟ್‌ ಸಲ್ಲಿಸಿರುವುದರಿಂದ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡರೂ, ಪ್ರತಿವಾದಿಯಾಗಿರುವ ಸ್ಪೀಕರ್‌ ಪರವಾದ ವಾದ ಹಾಗೂ ಕೆಪಿಸಿಸಿ ಕೆವಿಯೆಟ್‌ ಹಾಕಿರುವುದರಿಂದ ಅವರಿಗೂ ನೋಟಿಸ್‌ ನೀಡುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣ ನಿರೀಕ್ಷಿಸಿದಂತೆ ವೇಗವಾಗಿ ಇತ್ಯರ್ಥವಾಗುವ ವಿಶ್ವಾಸವನ್ನು ಅನರ್ಹ ಶಾಸಕರು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಗೋಳು ಹೇಳಿಕೊಳ್ಳಲಾರದ ಸ್ಥಿತಿ: ಶಾಸಕರು ಬಂಡಾಯ ಸಾರಿದಾಗ ಅನರ್ಹತೆಯ ಭೀತಿ ಎದುರಾದಾಗೆಲ್ಲಾ ಬಿಜೆಪಿ ನಾಯಕರು ಸ್ಪೀಕರ್‌ ಆದೇಶ ಮಾಡಿದ ಮೂರೇ ದಿನದಲ್ಲಿ ಪ್ರಕರಣ ಇತ್ಯರ್ಥವಾಗುತ್ತದೆ ಎಂದು ಭರವಸೆ ನೀಡಿದ್ದರು ಎನ್ನಲಾಗುತ್ತಿದೆ. ಅದೇ ನಂಬಿಕೆಯಿಂದಲೇ ಅನರ್ಹಗೊಂಡರೂ ಒಂದೇ ವಾರದಲ್ಲಿ ಮತ್ತೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುತ್ತೇವೆಂಬ ವಿಶ್ವಾಸದಲ್ಲಿದ್ದರು.

ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಳಂಬವಾಗುತ್ತಿರುವುದರಿಂದ ಉಪ ಚುನಾವಣೆ ಘೋಷಣೆಗೂ ಮೊದಲೇ ತಮ್ಮ ಅನರ್ಹತೆ ಪ್ರಕರಣ ಇತ್ಯರ್ಥವಾಗುವ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಪ್ರಕರಣ ಕೋರ್ಟ್‌ ಮೆಟ್ಟಿಲೇರಿರುವುದರಿಂದ ಯಾರ ವಿರುದ್ಧವೂ ಬಹಿರಂಗವಾಗಿ ಮಾತನಾಡದಂತಹ ಅಸಹಾ ಯಕ ಸ್ಥಿತಿಗೆ ತಲುಪಿದ್ದಾರೆ ಎನ್ನಲಾಗುತ್ತಿದ್ದು, ರಾಜಕೀಯ ಪ್ರವಾಹದಲ್ಲಿ ಸಿಲುಕಿರುವ ಅನರ್ಹರಿಗೆ ಸೂಕ್ತ ಪರಿಹಾರ ಸಿಗುತ್ತದೆಯಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ತ್ವರಿತ ವಿಚಾರಣೆಗೆ ಪ್ರತ್ಯೇಕ ಮನವಿ: ಸುಪ್ರೀಂಕೋರ್ಟ್‌
ನವದೆಹಲಿ: ಕರ್ನಾಟಕ ವಿಧಾನಸಭೆಯಿಂದ ತಮ್ಮನ್ನು ಅನರ್ಹಗೊಳಿಸಿರುವುದರ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ, ಅವರ ಅರ್ಜಿಯ ತ್ವರಿತ ವಿಚಾರಣೆಗಾಗಿ ಪ್ರತ್ಯೇಕವಾಗಿ ಮನವಿಯೊಂದನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ.

ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ ಅವರಲ್ಲಿ ಈ ಮನವಿ ಸಲ್ಲಿಸಬೇಕೆಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ನೇತೃತ್ವದ ಪೀಠ, ಶಾಸಕರ ಪರ ವಕೀಲರಾದ ಮುಕುಲ್‌ ರೋಹಟಗಿ ಅವರಿಗೆ ಸೂಚಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಆ. 19ರಂದು ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ರೋಹಟಗಿ ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು. ಆಗ, ನ್ಯಾಯಪೀಠ ಅದಕ್ಕೆ ಪ್ರತ್ಯೇಕ ಮನವಿ ಸಲ್ಲಿಸುವಂತೆ ಸೂಚಿಸಿತು.

* ಶಂಕರ ಪಾಗೋಜಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ