20 ಶಾಸಕರು ಜೆಡಿಎಸ್ ತೊರೆಯಲು ರೆಡಿ

Team Udayavani, Sep 15, 2019, 3:10 AM IST

ಮಂಡ್ಯ: “ಜೆಡಿಎಸ್ ತೊರೆಯುವುದಕ್ಕೆ 20 ಶಾಸಕರು ರೆಡಿ ಇದ್ದಾರೆ. ಆದರೆ, ನಾನು ಅವರ ಹೆಸರು ಹೇಳೋಲ್ಲ. ಜೆಡಿಎಸ್ ಶಾಸಕರಾಗಿದ್ದ ನಾವು ಪಕ್ಷ ಹಾಳಾಗಲಿ ಎಂದು ಬಯಸುವುದಿಲ್ಲ. ಪಕ್ಷ ಬಿಡಲು ತುದಿಗಾಲಲ್ಲಿ ನಿಂತಿರುವವರನ್ನು ಅವರು ಸುರಕ್ಷಿತವಾಗಿಟ್ಟುಕೊಳ್ಳಲಿ ಎಂದಷ್ಟೇ ಹೇಳುತ್ತಿದ್ದೇನೆ’ ಎಂದು ಕೆ.ಆರ್.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಕೆ.ಆರ್.ಪೇಟೆಯ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ದೇವೇಗೌಡ ಕುಟುಂಬದ ವಿರುದ್ಧ ಹರಿಹಾಯ್ದರು. ನಿಖಿಲ್ ಸ್ಪರ್ಧೆಗೆ ಒಂದು ರೀತಿಯಲ್ಲಿ ನಾವೂ ಕಾರಣ. ಆದರೆ, ಸಿಎಂ ಆಗಿದ್ದ ಕುಮಾರಸ್ವಾಮಿ ಹೇಳಿದ ಸುಳ್ಳುಗಳೇ ನಿಖಿಲ್ ಸೋಲಿಗೆ ಕಾರಣವಾದವು. ನಮಗೆ ಈ ಸ್ಥಿತಿ ಬರಲು ಕೂಡ ಅವರ ಸುಳ್ಳುಗಳೇ ಕಾರಣ.

ಮಂಡ್ಯದ ಅಭಿವೃದ್ಧಿಗೆ 8,700 ಕೋಟಿ ರೂ.ನೀಡಿದ್ದೇವೆಂದು ಕುಮಾರಸ್ವಾಾಮಿ ಹೇಳಿಕೊಂಡು ತಿರುಗಾಡಿದರು. ಜಿಲ್ಲೆಗೆ ಹಣ ಕೊಡ್ತಾ ಇದೀನಿ ಅಂತ ಹೇಳಿದರೇ ವಿನಃ ಕೊಟ್ಟಿದ್ದೀನಿ ಎಂದು ಕೊನೆಯವರೆಗೂ ಹೇಳಲೇ ಇಲ್ಲ. ಅಷ್ಟಕ್ಕೂ, 8,700 ಕೋಟಿ ರೂ.ಯೋಜನೆಗಳ ಪೈಕಿ ಯಾವುದು ಚಾಲನೆಗೆ ಬಂದಿದೆ ಎಂದು ಅವರು ಪ್ರಶ್ನಿಸಿದರು. ಪಕ್ಷದ ಶಾಸಕರಿಗೆ ಛೇಂಬರ್ ಒಳಗೆ ಕೂಡಲು ಅವರು ಬಿಡುತ್ತಿಿರಲಿಲ್ಲ. ಕಷ್ಟ ಹೇಳಿಕೊಳ್ಳಲು ಹೋದ ಶಾಸಕರನ್ನು ನಾಳೆ ಬನ್ನಿ ಅಂತ ಕಣ್ಣು ಹೊಡೆಯೋರು. ನಾಳೆ ಬಂದರೆ ಇರುತ್ತಲೇ ಇರಲಿಲ್ಲ ಎಂದರು.

ಗೌಡರಿಂದ ಕುಟುಂಬ ರಾಜಕಾರಣ: ಇದೇ ವೇಳೆ, ದೇವೇಗೌಡರ ವಿರುದ್ಧವೂ ವಾಗ್ದಾಾಳಿ ನಡೆಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಇಳಿ ವಯಸ್ಸಿನಲ್ಲೂ ದೇಶ ರಾಜಕಾರಣ ಮಾಡದೆ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಕುಟುಂಬ ಹಾಗೂ ಮಕ್ಕಳಿಗಾಗಿ ರಾಜ್ಯವನ್ನು ಹಾಳು ಮಾಡುತ್ತಿಿದ್ದಾಾರೆ. ಈಗಲಾದರೂ ಅವರು ಮಕ್ಕಳನ್ನು ಹತೋಟಿಗೆ ತೆಗೆದುಕೊಳ್ಳಬೇಕೆಂದು ಛೇಡಿಸಿದರು.

“ಕಳೆದ ಚುನಾವಣೆ ವೇಳೆ ಪ್ರಚಾರಕ್ಕೆ ಬರುತ್ತೇನೆ, ಜನರನ್ನು ರೆಡಿ ಮಾಡಿಕೋ ಎಂದಿದ್ದರು. ಕೊನೆಗೆ, ಹೆಣ್ಣು ಮಕ್ಕಳ ಮಾತು ಕೇಳಿ ಅರಸೀಕೆರೆಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ತಿರುಗಿಸಿದರು. ನನ್ನ ಪರ ಪ್ರಚಾರಕ್ಕೆ ಬರಲೇ ಇಲ್ಲ’ ಎಂದರು. ಕೆ.ಆರ್.ಪೇಟೆ ಕೃಷ್ಣ ಅವರನ್ನು ರಾಜಕೀಯವಾಗಿ ದೂರ ಮಾಡಲು ನನ್ನನ್ನು ಕೆ.ಆರ್.ಪೇಟೆಗೆ ಕರೆ ತಂದರು. ಸಿದ್ದಿವಿನಾಯಕ ದೇಗುಲದಲ್ಲಿ ದೇವೇಗೌಡರು ನನ್ನ ತಲೆ ಮೇಲೆ ಕೈ ಇಟ್ಟು, “ನಿನ್ನನ್ನು ಶಾಸಕನನ್ನಾಾಗಿ ಮಾಡ್ತೀನಿ. ನಾಯಕನನ್ನಾಗಿ ಬೆಳೆಸುತ್ತೇನೆ’ ಎಂದಿದ್ದರು ಎಂದರು.

ರೇವಣ್ಣ ಏನೂಂತ ಗುತ್ತಿಗೆದಾರರಿಗೆ ಗೊತ್ತು: ಎಚ್.ಡಿ.ರೇವಣ್ಣ 17 ಶಾಸಕರಿಗೆ ಕೊಟ್ಟ ಕಿರುಕುಳವೇ ಸಮ್ಮಿಶ್ರ ಸರ್ಕಾರ ಉರುಳುವುದಕ್ಕೆ ಕಾರಣ. ಎಲ್ಲಾ ಇಲಾಖೆಯಲ್ಲೂ ಅವರು ಹಸ್ತಕ್ಷೇಪ ಮಾಡುತ್ತಿದ್ದುದರಿಂದಲೇ ಬೇಸತ್ತು ಶಾಸಕರು ಹೊರ ಬಂದಿದ್ದಾಾರೆ ಎಂದರು. “ನನ್ನನ್ನು ಚಂಗಲು’ ಎಂದು ರೇವಣ್ಣ ಜರಿದಿದ್ದಾರೆ. ಹಾಗಿದ್ದ ಮೇಲೆ ನನ್ನಂತಹ ವ್ಯಕ್ತಿಯಿಂದ ಅವರು ಏಕೆ ಸಹಕಾರ ತೆಗೆದುಕೊಂಡರು?. ಹಾಸನದಲ್ಲಿ ರೇವಣ್ಣ ಕೂಡ ಹೋಟೆಲ್ ಮಾಡಿದ್ದಾರೆ. ಅವರ ಹೋಟೆಲ್‌ನಲ್ಲಿ ನಾನೂ ಒಂದೂವರೆ ವರ್ಷ ದುಡಿದಿದ್ದೇನೆ. ಹೊಟ್ಟೆ-ಬಟ್ಟೆಗಾಗಿ ಮುಂಬೈಗೆ ಹೋದವನು ನಾನು. ಹಗಲು-ರಾತ್ರಿ ದುಡಿದು ಸಮಾಜಸೇವಕನಾಗಿದ್ದೇನೆ. ರೇವಣ್ಣ ಏನೂ ಅಂತ ಕರ್ನಾಟಕದ ಎಲ್ಲಾಾ ಕಾಂಟ್ರಾಕ್ಟರ್ಸ್‍ಗೆ ಗೊತ್ತು ಎಂದರು.

ಡಿಕೆಶಿ ಕಾಲಿಗೆ ಬಿದ್ದಿದ್ದೆ: ಸಿದ್ದರಾಮಯ್ಯನವರು ಸಾಹುಕಾರ್ ಚನ್ನಯ್ಯ ನಾಲೆಯನ್ನು 4 ತಾಲೂಕಿಗೆ ಕೊಟ್ಟು 840 ಕೋಟಿ ರೂ.ಬಿಡುಗಡೆ ಮಾಡಿದ್ದರು. ರೇವಣ್ಣನವರು, ಅಲ್ಲಿನ ಚೀಫ್ ಇಂಜಿನಿಯರ್‌ನ್ನು ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರನ್ನಾಾಗಿ ಮಾಡಿದರು. ಇದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಮುನಿಸಿಕೊಂಡಿದ್ದರು. ನಾನು ಅವರ ಕಾಲು ಮುಟ್ಟಿ ಸಮಾಧಾನ ಮಾಡಿದ್ದೆ. ಸರ್ಕಾರದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದೆ’ ಎಂದು ಹೇಳಿದರು. “ನನ್ನ ತಾಲೂಕಿಗೆ ಕೊಟ್ಟಿರೋದು 50 ಕೋಟಿ ರೂ. ಡಿ.ಕೆ.ಶಿವಕುಮಾರ್ ಅವರಿಂದ 200 ಕೋಟಿ ರೂ.ಅಪ್ರೂವಲ್ ಮಾಡಿಸಿದೆ. 64 ಮತ್ತು 54ನೇ ನಾಲೆಗೆ ಮಂಜೂರು ತಂದೆ. ಆದರೆ, ಅದನ್ನು ರೇವಣ್ಣ ಕಿತ್ತುಕೊಂಡರು’ ಎಂದು ಟೀಕಿಸಿದರು.

ಡಿಕೆಶಿ ಕಷ್ಟಕ್ಕೆ ಕುಟುಂಬ ಸ್ಪಂದಿಸುತ್ತಿಲ್ಲವೇಕೆ?: ಡಿಕೆಶಿಯವರು ಇ.ಡಿ ಸಂಕಷ್ಟ ಎದುರಿಸಲು ಯಾರು ಕಾರಣ ಎನ್ನುವುದು ಸಂದರ್ಭ ಬಂದಾಗ ಗೊತ್ತಾಗುತ್ತೆ. ಶಿವಕುಮಾರ್ ಬಂಧನದ ಹಿಂದೆ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಇಲ್ಲವೇ ಇಲ್ಲ. ಕಬ್ಬಿಣವನ್ನು ಕಬ್ಬಿಣದಿಂದಲೇ ಬಡಿಯಬೇಕು ಎಂದು 6 ವರ್ಷದಿಂದ ಅವರ ವಿರುದ್ಧ ಪಿತೂರಿ ನಡೆಯುತ್ತಿತ್ತು. ಡಿ.ಕೆ.ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅಳಿಯನನ್ನು ಬೆಳೆಯೋಕೆ ಬಿಡಬಾರದೆಂಬ ಉದ್ದೇಶ ಇದರ ಹಿಂದೆ ಅಡಗಿತ್ತು. ದೇವೇಗೌಡರ ಕುಟುಂಬದ ಎದುರು ಸಮುದಾಯದ ನಾಯಕರು ಬೆಳೆಯಬಾರದು. ಯಾರೂ ದೊಡ್ಡವರಾಗಿರಬಾರದು ಎಂಬುದು ಅವರ ಬಯಕೆ. ಇದು ಸುಳ್ಳಾಾಗಿದ್ದರೆ ಡಿ.ಕೆ.ಶಿವಕುಮಾರ್ ಕಷ್ಟಕ್ಕೆ ದೇವೇಗೌಡರ ಕುಟುಂಬ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ನಾನು ಒಕ್ಕಲಿಗನಾಗಿ ಹುಟ್ಟಬಾರದಿತ್ತು ಎಂದು ದೇವೇಗೌಡರು ನೂರಾರು ಬಾರಿ ಹೇಳಿದ್ದಾರೆ. ಆದರೆ, ಪ್ರಧಾನಿ ಪಟ್ಟಕ್ಕೆ ಗೌಡರನ್ನು ಕೂರಿಸಿದವರು ಒಕ್ಕಲಿಗರೇ ಎನ್ನುವುದನ್ನು ಅವರು ಮರೆಯಬಾರದು. ಒಕ್ಕಲಿಗರು ಅವರನ್ನು ಪೂಜಿಸಿದರು. ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಾಡಲು ಮನೆ, ಮನೆಯಿಂದ ಹಣ ಸಂಗ್ರಹ ಮಾಡಿದರು. ಜನರಿಗೆ ಇನ್ನೂ ಅವರ ಬಗ್ಗೆ ಗೌರವವಿದೆ. ಅದನ್ನವರು ಉಳಿಸಿಕೊಳ್ಳಬೇಕು.
-ಕೆ.ಸಿ.ನಾರಾಯಣಗೌಡ, ಅನರ್ಹ ಶಾಸಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ