ಮನೆಗೆ ಹೋಗಿ ಬರಲು ಹಾಕಿ ಆಟಗಾರರಿಗೆ ಷರತ್ತುಬದ್ಧ ಅವಕಾಶ
Team Udayavani, May 24, 2020, 6:12 AM IST
ಹೊಸದಿಲ್ಲಿ: ಕಳೆದೆರಡು ತಿಂಗಳಿಂದ ಬೆಂಗಳೂರಿನ ಸಾಯ್ ಸೆಂಟರ್ನಲ್ಲೇ ಉಳಿದುಕೊಂಡು “ಹೋಮ್ಸಿಕ್’ ಅನುಭವಿಸುತ್ತಿರುವ ಹಾಕಿ ಆಟಗಾರರಿಗೆ ಒಮ್ಮೆ ಮನೆಗೆ ಹೋಗಿ ಬರಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮರಳಿ ಶಿಬಿರಕ್ಕೆ ಹಾಜರಾಗುವ ಮೊದಲು 14 ದಿನಗಳ ಕಡ್ಡಾಯ ಕ್ವಾರಂಟೈನ್ನಲ್ಲಿ ಇರಬೇಕೆಂಬ ಕಟ್ಟಪ್ಪಣೆಯನ್ನೂ ವಿಧಿಸಲಾಗಿದೆ.
ಆದರೆ ಈ ಸಂದರ್ಭದಲ್ಲಿ ಹಾಕಿ ಇಂಡಿಯಾದ “ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್’ನ (ಎಸ್ಒಪಿ) ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.
ಹಾಕಿ ಆಟಗಾರರು ಯಾವುದೇ ಗೆಳೆಯರನ್ನು ಭೇಟಿಯಾಗುವಂತಿಲ್ಲ. ನೇರವಾಗಿ ಕುಟುಂಬದವರನ್ನೇ ಭೇಟಿ ಆಗಬೇಕು. ಯಾವುದೇ ಸಂದರ್ಶಕರು ಮನೆಗೆ ಬರುವಂತಿಲ್ಲ. ಹಾಗೆಯೇ ಆಟಗಾರರೂ ಮನೆಯಿಂದ ಹೊರಗೆ ಹೋಗುವಂತಿಲ್ಲ ಎಂಬುದೆಲ್ಲ ಎಸ್ಒಪಿಯ ನಿಯಮಗಳಾಗಿವೆ.