ಅಮೆಜಾನ್ನಲ್ಲಿ ಅನಂತ್ನಾಗ್ ಚಿತ್ರ
Team Udayavani, May 27, 2020, 3:58 AM IST
ಕಳೆದ ವರ್ಷ ಬಿಡುಗಡೆಯಾಗಿದ್ದ ಹಿರಿಯ ನಟ ಅನಂತನಾಗ್ ಅಭಿನಯದ ಚಿತ್ರ ವೀಕೆಂಡ್ ಈಗ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಆಧುನಿಕ ಜಗತ್ತಿನ ಪಾಲಿಗೆ ನಿರಾಳ ಭಾವ ಮೂಡಿಸೋ ಶೀರ್ಷಿಕೆಯ ಈ ಸಿನಿಮಾ ಶೃಂಗೇರಿ ಸುರೇಶ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಕನ್ನಡ ಚಿತ್ರರಂಗದ ವಿವಿಧ ಆಯಾಮಗಳ ಭಾಗವಾಗುತ್ತಾ, ಕಾಲ ಕಾಲಕ್ಕೆ ಅಪ್ಡೇಟ್ ಆಗುತ್ತಾ ಬಂದಿರೋ ಸುರೇಶ್ ಅವರು ಈಗಿನ ಯುವ ಸಮುದಾಯದ ತಲ್ಲಣಗಳಿಗೆ ಕಣ್ಣಾಗುವಂಥಾ ಕಥಾನಕದ ದೃಶ್ಯಕಾವ್ಯವನ್ನು ಕಟ್ಟಿ ಕೊಟ್ಟಿದ್ದರು.
ಅದು ಎಲ್ಲ ವರ್ಗದ ಪ್ರೇಕ್ಷಕರ ಪಾಲಿಗೂ ತುಂಬಾನೇ ಇಷ್ಟವಾಗಿತ್ತು. ಹೀಗೆ ಗೆಲುವು ಕಂಡಿದ್ದ ಈ ಚಿತ್ರವೀಗ ಅಮೆಜಾನ್ ಪ್ರೈಮ್ಗೆ ಲಗ್ಗೆಯಿಟ್ಟಿದೆ. ಕೊರೋನಾ ಕಾರಣದ ಲಾಕ್ಡೌನ್ ಘೋಷಣೆ ಯಾದಾಗಿನಿಂದಲೂ ಬಹುತೇಕರು ಮನೆಯೊಳಗೇ ಬಂಧಿಯಾಗಿದ್ದಾರೆ. ಇದೀಗ ಕೊಂಚ ಸಡಿಲಿಕೆಯಾಗಿದ್ದರೂ ಕೂಡಾ ಮನೆಯಲ್ಲಿಯೇ ಹೆಚ್ಚಿನ ಕಾಲ ಕಳೆಯದೆ ವಿಧಿಯಿಲ್ಲ.
ಇಂಥಾ ಹೊತ್ತಿನಲ್ಲಿ ಜನರ ಪಾಲಿಗೆ ಕೊಂಚ ರಿಲೀಫ್ ನೀಡಿರುವುದು ಸಿನಿಮಾ ಮ್ಯಾಜಿಕ್. ಅಮೆಜಾನ್ ಪ್ರೈಮ್ನಂಥಾ ಆನ್ಲೈನ್ ತಾಣಗಳಲ್ಲಿ ಸಿನಿಮಾ ನೋಡಿ ಖುಷಿಗೊ ಪ್ರೇಕ್ಷಕರ ಸಂಖ್ಯೆಯೀಗ ಹೆಚ್ಚಾಗಿದೆ. ಈ ಕಾರಣದಿಂದಲೇ ಅನೇಕ ಕನ್ನಡ ಸಿನಿಮಾಗಳ ಆನ್ಲೈನಿನಲ್ಲಿಯೇ ಹಿಟ್ ಆಗಿವೆ. ಇದೀಗ ಆ ಸಾಲಿಗೆ ವೀಕೆಂಡ್ ಚಿತ್ರ ಹೊಸ ಸೇರ್ಪಡೆಯಾಗಿದೆ.