ನಡಾಲ್, ಒಸಾಕಾ, ಬಾರ್ಟಿ ಓಟ ಆರಂಭ
Team Udayavani, Jan 18, 2022, 4:46 AM IST
ಮೆಲ್ಬರ್ನ್: ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಅವರಿಗೆ ಗೇಟ್ಪಾಸ್ ಕೊಟ್ಟ ಬಳಿಕ ಆರಂಭಗೊಂಡ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ರಫೆಲ್ ನಡಾಲ್, ನವೋಮಿ ಒಸಾಕಾ, ಆ್ಯಶ್ಲಿ ಬಾರ್ಟಿ ಗೆಲುವಿನ ಓಟ ಆರಂಭಿಸಿದ್ದಾರೆ.
ಮೊದಲ ದಿನದಾಟದಲ್ಲಿ ಒಟ್ಟು 64 ಪಂದ್ಯಗಳು ನಡೆದವು. ಪುರುಷರ ವಿಭಾಗದ ಫೇವರಿಟ್ ಆಟಗಾರ ರಫೆಲ್ ನಡಾಲ್ ಅಮೆರಿಕದ ಮಾರ್ಕೋಸ್ ಗಿರೋನ್ ವಿರುದ್ಧ 6-1, 6-4, 6-2ರಿಂದ ಗೆದ್ದು ಬಂದರು. ನಡಾಲ್ ಈ ಕೂಟದ ಏಕೈಕ ಮಾಜಿ ಚಾಂಪಿಯನ್ ಆಗಿದ್ದಾರೆ. ಅವರು 2009ರಲ್ಲಿ ಕಿರೀಟ ಏರಿಸಿದ್ದರು.
ಅಲೆಕ್ಸಾಂಡರ್ ಜ್ವೆರೇವ್ 2 ಟೈ ಬ್ರೇಕರ್ಗಳಲ್ಲಿ ಮೇಲುಗೈ ಸಾಧಿಸಿ ಜರ್ಮನಿಯ ಡೇನಿಯಲ್ ಆಲ್ಟ್ ಮೇಯರ್ ಅವರನ್ನು 7-6, 6-1, 7-6 (7-1) ಅಂತರ ದಿಂದ ಮಣಿಸಿದರು. ಮ್ಯಾಟಿಯೊ ಬರೆಟಿನಿ, ಡೆನ್ನಿಸ್ ಶಪೊವಲೋವ್, ಕರೆನ್ ಕಶನೋವ್, ಗೇಲ್ ಮಾನ್ಫಿಲ್ಸ್ ಕೂಡ ದ್ವಿತೀಯ ಸುತ್ತು ತಲುಪಿದ್ದಾರೆ.
ವನಿತಾ ವಿಭಾಗ
ವನಿತಾ ವಿಭಾಗದಲ್ಲಿ ಹಾಲಿ ಚಾಂಪಿಯನ್ ನವೋಮಿ ಒಸಾಕಾ 6-3, 6-3ರಿಂದ ಕೊಲಂಬಿಯಾದ ಕ್ಯಾಮಿಲಾ ಒಸೋರಿಯೊ ಅವರಿಗೆ ಸೋಲುಣಿಸಿದರು. ಆತಿಥೇಯ ನಾಡಿನ ಆ್ಯಶ್ಲಿ ಬಾರ್ಟಿ ಉಕ್ರೇನಿನ ಲೆಸಿಯಾ ಸುರೆಂಕೊ ಅವರನ್ನು 6-0, 6-1 ಅಂತರದಿಂದ ಸುಲಭದಲ್ಲಿ ಮಣಿ ಸಿದರು. ಮರಿಯಾ ಸಕ್ಕರಿ ಜರ್ಮನಿಯ ಟಜಾನಾ ಮಾರಿಯಾ ವಿರುದ್ಧ 6-4, 7-6 (7-2) ಅಂತರದಿಂದ ಗೆದ್ದು ಬಂದರು.
ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಬೆಲಿಂಡಾ ಬೆನ್ಸಿಕ್, ಎಲಿನಾ ಸ್ವಿಟೋಲಿನಾ, ಅಮಂಡಾ ಅನಿಸಿಮೋವಾ, ವಿಕ್ಟೋರಿಯಾ ಅಜರೆಂಕಾ ಮೊದಲ ಸುತ್ತು ದಾಟಿದ ಪ್ರಮುಖರು.