ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವಕ್ಕೆ ಬಿಜೆಪಿ ಗುರಿ

Team Udayavani, Jun 20, 2019, 3:09 AM IST

ಬೆಂಗಳೂರು: ರಾಷ್ಟ್ರಾದ್ಯಂತ ಜು. 6ರಿಂದ ಆ.11ರವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಕರ್ನಾಟಕದಲ್ಲೂ 50 ಲಕ್ಷ ಸದಸ್ಯತ್ವ ಸೇರ್ಪಡೆಗೆ ರಾಜ್ಯ ಬಿಜೆಪಿ ಗುರಿ ಹಾಕಿಕೊಂಡಿದೆ.

ದೇಶಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಬಿಜೆಪಿ ಸಿದ್ಧತೆ ನಡೆಸಿದ್ದು, ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಬುಧವಾರ ಎಲ್ಲ ರಾಜ್ಯಗಳ ಪ್ರಮುಖ ನಾಯಕರು ಹಾಗೂ ಸದಸ್ಯತ್ವ ಅಭಿಯಾನ ರಾಜ್ಯ ಉಸ್ತುವಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಚರ್ಚೆ ನಡೆಸಿದರು. ಅದರಂತೆ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಆಯ್ದ ಪದಾಧಿಕಾರಿಗೊಂದಿಗೆ ಮಾತುಕತೆ ನಡೆಸಿದರು.

ಕಾಲಮಿತಿಯಲ್ಲಿ ಸದಸ್ಯತ್ವ ಅಭಿಯಾನ ನಡೆಸುವುದರ ಜತೆಗೆ ಶಕ್ತಿ ಕೇಂದ್ರದ ಮಟ್ಟದವರೆಗೂ ಸದಸ್ಯತ್ವ ನೋಂದಣಿ ತಲುಪುವುದನ್ನು ಖಾತರಿಪಡಿಸಿಕೊಳ್ಳಬೇಕು. ವಿಶೇಷವಾಗಿ ಸದಸ್ಯತ್ವದ ಪ್ರಮಾಣ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಸದಸ್ಯತ್ವಕ್ಕೆ ಒತ್ತು ನೀಡಬೇಕು ಎಂದು ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ.

ಸರ್ವವ್ಯಾಪಿ- ಸರ್ವಸ್ಪರ್ಶಿಯಾಗಿರಲಿ: ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಉಸ್ತುವಾರಿ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರು ಮಧ್ಯಪ್ರದೇಶದಿಂದಲೇ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಚರ್ಚಿಸಿದರು. ರಾಷ್ಟ್ರವ್ಯಾಪಿ ಬಿಜೆಪಿ ಸದಸ್ಯತ್ವ ಅಭಿಯಾನವು ಡಾ.ಶ್ಯಾಮಪ್ರಸಾದ್‌ ಮುಖರ್ಜಿಯವರ ಜನ್ಮದಿನವಾದ ಜು.6ರಂದು ಆರಂಭವಾಗಲಿದ್ದು, ಆ.11ಕ್ಕೆ ಮುಕ್ತಾಯವಾಗಲಿದೆ.

ಪಕ್ಷದ ಸದಸ್ಯತ್ವವು ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಬೇಕು. ಒಂದು ವಾರ ಕಾಲ ಸದಸ್ಯತ್ವ ಅಭಿಯಾನಕ್ಕಾಗಿ ವಿಸ್ತಾರಕರನ್ನು ನಿಯೋಜಿಸಬೇಕು. ಪಕ್ಷ ಆಡಳಿತದಲ್ಲಿ ಇಲ್ಲದ ರಾಜ್ಯಗಳಲ್ಲೂ ಸದಸ್ಯತ್ವ ನೋಂದಣಿಗೆ ವಿಶೇಷ ಮಹತ್ವ ನೀಡಬೇಕು ಎಂದು ಸೂಚಿಸಿದ್ದಾರೆ.

ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಘಟಕವು ಈ ಬಾರಿಯ ಸದಸ್ಯತ್ವ ಅಭಿಯಾನಕ್ಕೆ ವಿಶೇಷ ಯೋಜನೆ ರೂಪಿಸಿದೆ. ಬಿಜೆಪಿಯ ಐಟಿ ಘಟಕದ ರಾಷ್ಟ್ರೀಯ ಸಂಚಾಲಕ ಅಮಿತ್‌ ಮಾಳವೀಯ ಅವರು ಸದಸ್ಯತ್ವ ನೋಂದಣಿಗೆ ರೂಪಿಸಿರುವ ಯೋಜನೆಗಳ ಬಗ್ಗೆ ವಿವರ ನೀಡಿದರು.

ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ಗುರಿ: ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕಳೆದ ಬಾರಿ ರಾಜ್ಯದಲ್ಲಿ 80 ಲಕ್ಷ ಸದಸ್ಯತ್ವ ನೋಂದಣಿಯಾಗಿತ್ತು. ಈ ಬಾರಿ ಇನ್ನೂ 50 ಲಕ್ಷ ಸದಸ್ಯತ್ವವನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುವುದು. ರಾಜ್ಯದಲ್ಲಿ ಪಕ್ಷದ ಮಾಹಿತಿ ತಂತ್ರಜ್ಞಾನ ಘಟಕವು ಸಕ್ರಿಯವಾಗಿದ್ದು, ಈ ಗುರಿ ತಲುಪುವ ವಿಶ್ವಾಸವಿದೆ ಎಂದು ಹೇಳಿದರು.

ವಿಡಿಯೋ ಸಂವಾದದಲ್ಲಿ ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನ ಉಸ್ತುವಾರಿ ಎನ್‌.ರವಿಕುಮಾರ್‌, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಶಾಸಕ ಎಸ್‌.ಮುನಿರಾಜು, ಮುಖಂಡ ಚಲವಾದಿ ನಾರಾಯಣಸ್ವಾಮಿ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಪಕ್ಷ ತಲುಪುದವರನ್ನು ತಲುಪಿ: ಸದಸ್ಯತ್ವ ಅಭಿಯಾನಕ್ಕೆ ಸಿದ್ಧತೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಏಕ ಕಾಲಕ್ಕೆ ಎಲ್ಲ ರಾಜ್ಯಗಳ ಬಿಜೆಪಿ ಅಧ್ಯಕ್ಷರು, ಆಯ್ದ ಪದಾಧಿಕಾರಿಗಳೊಂದಿಗೆ ರಾಷ್ಟ್ರೀಯ ನಾಯಕರು ಸಂವಾದ ನಡೆಸಿದರು. ರಾಷ್ಟ್ರವ್ಯಾಪಿ ನಡೆಯಲಿರುವ ಸದಸ್ಯತ್ವ ಅಭಿಯಾನದಲ್ಲಿ ಪಕ್ಷ ತಲುಪದವರನ್ನು ತಲುಪಿ ಸದಸ್ಯರನ್ನಾಗಿ ಸೇರ್ಪಡೆ ಮಾಡಿಕೊಳ್ಳಲು ಆದ್ಯತೆ ನೀಡಬೇಕು.

ಸಂಘಟನೆ ದುರ್ಬಲವಾಗಿರುವ ಕಡೆ ವಿಶೇಷ ಆದ್ಯತೆ ನೀಡಿ ಸದಸ್ಯತ್ವ ನೋಂದಣಿ ಹೆಚ್ಚು ಮಾಡಬೇಕು ಜು. 6ರಂದು ಸದಸ್ಯತ್ವ ಅಭಿಯಾನಕ್ಕೆ ಅದ್ಧೂರಿ ಚಾಲನೆ ನೀಡಲು ಸಿದ್ಧತೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಉಪಚುನಾವಣೆಯಲ್ಲಿ ಎರಡಂಕಿ ಸ್ಥಾನ ಗೆದ್ದು ಸರ್ಕಾರ ಸುಭದ್ರಗೊಳಿಸುವ ವಿಶ್ವಾಸದಲ್ಲಿರುವ ಬಿಜೆಪಿ, ಆಯ್ದ ಪ್ರಮುಖ ಕ್ಷೇತ್ರಗಳಲ್ಲಿ ವ್ಯತಿರಿಕ್ತ...

  • ಬೆಂಗಳೂರು: ನಾಲ್ವರು ಆರೋಪಿಗಳು ಮಹಜರು ಕಾರ್ಯದ ವೇಳೆ ಪೊಲೀಸ್‌ ಸಿಬಂದಿಯ ಮೇಲೆ ತಿರುಗಿಬಿದ್ದು ಕೊಲೆಗೆ ಯತ್ನಿಸಿದರು... ಈ ವೇಳೆ ಅನಿವಾರ್ಯವಾಗಿ ಪ್ರಾಣ ರಕ್ಷಣೆಗಾಗಿ...

  • ಬೆಂಗಳೂರು: ಉಪ ಚುನಾವಣೆ ಫ‌ಲಿತಾಂಶದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಪ್ರಮುಖವಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ...

  • ಬೆಂಗಳೂರು: ಮತದಾನೋತ್ತರ ಸಮೀಕ್ಷೆಯಂತೆ ಬಿಜೆಪಿಗೆ ಸುಭದ್ರ ಸರ್ಕಾರದ ಭರವಸೆ ಮೂಡಿಸಿದ್ದು, ಜೆಡಿಎಸ್‌ ನಿರೀಕ್ಷಿತ ಸ್ಥಾನ ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

ಹೊಸ ಸೇರ್ಪಡೆ