ಸುಪ್ರೀಂಕೋರ್ಟ್‌ ತೀರ್ಪು ಆಧರಿಸಿ ಮುಂದಿನ ಕ್ರಮಕ್ಕೆ ಬಿಜೆಪಿ ನಿರ್ಧಾರ

Team Udayavani, Nov 12, 2019, 3:07 AM IST

ಬೆಂಗಳೂರು: ಟಿಕೆಟ್‌ ಸಿಗುವ ಖಾತರಿ ಇಲ್ಲದ ಕಾರಣ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್‌ ಸೇರ್ಪಡೆಯಾಗಲು ಮುಂದಾಗಿದ್ದು, ಇನ್ನೊಂದೆಡೆ ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಸಜ್ಜಾಗಿರುವುದು ಬಿಜೆಪಿಗೆ ತಲೆನೋವು ತಂದಿದ್ದು, ಶಿಸ್ತು ಕ್ರಮ ಜರುಗಿ ಸುವ ಬಗ್ಗೆ ಚಿಂತಿಸಿದೆ. ಇದರ ನಡುವೆ ರಾಜು ಕಾಗೆ ಹಾಗೂ ಅಶೋಕ್‌ ಪೂಜಾರಿ ಜತೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ರಾಜು ಕಾಗೆ ಕಾಂಗ್ರೆಸ್‌ ಸೇರುವುದಾಗಿ ಘೋಷಿಸಿರುವ ಬೆನ್ನಲ್ಲೇ ಗೋಕಾಕ್‌ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ್‌ ಪೂಜಾರಿ ನ.13ರಂದು ಸುಪ್ರೀಂಕೋರ್ಟ್‌ ತೀರ್ಪು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪಕ್ಷದಲ್ಲಿದ್ದುಕೊಂಡೇ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿರುವುದನ್ನು ರಾಜ್ಯ ಬಿಜೆಪಿ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣವೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ.

ಸುಪ್ರೀಂಕೋರ್ಟ್‌ ಬುಧವಾರ ನೀಡುವ ತೀರ್ಪಿನ ಆಧಾರದ ಮೇಲೆ ಸಾಧಕ- ಬಾಧಕ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ತೀರ್ಮಾನಿಸಿದೆ. ಎಲ್ಲರ ವಿರುದ್ಧವೂ ಒಮ್ಮೆಗೆ ಕ್ರಮ ಜರುಗಿಸುವ ಬದಲಿಗೆ ಒಂದಿಬ್ಬರ ವಿರುದ್ಧ ಕ್ರಮ ಕೈಗೊಂಡು ಉಳಿದವರಿಗೆ ಎಚ್ಚರಿಕೆ ಸಂದೇಶ ರವಾನಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

“ಮಾತುಕತೆ ನಡೆಸಲಾಗುವುದು’: ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿರುವ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಹಾಗೂ ಪರಾಜಿತ ಅಭ್ಯರ್ಥಿ ಅಶೋಕ್‌ ಪೂಜಾರಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ನಗರದ ಡಾಲರ್ ಕಾಲೋನಿ ನಿವಾಸದ ಬಳಿ ಸೋಮವಾರ ಪ್ರತಿಕ್ರಿಯಿಸಿದ ಅವರು, ರಾಜು ಕಾಗೆ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ವಿಚಾರ ಗೊತ್ತಿಲ್ಲ. ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ.

ರಾಜು ಕಾಗೆ ಹಾಗೂ ಅಶೋಕ್‌ ಪೂಜಾರಿ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದರು. ನಮ್ಮವರು ಆ ಕಡೆ ಹೋಗುತ್ತಾರೆ. ಅವರ ಕಡೆಯವರು ನಮ್ಮ ಕಡೆಗೆ ಬರುತ್ತಾರೆ. ಅಂತಿಮವಾಗಿ ಏನಾಗುವುದೋ ಕಾದು ನೋಡೋಣ. ಏನೇ ಆದರೂ ನಾವು ಉಪಚುನಾವಣೆಯಲ್ಲಿ 12ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು. ಹೊಸಕೋಟೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ಶರತ್‌ ಬಚ್ಚೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಯಡಿಯೂರಪ್ಪ, ಆ ಬಗ್ಗೆ ನಾನು ಮಾತನಾಡುವುದಿಲ್ಲ. ಆ ಬಗ್ಗೆ ಚರ್ಚೆ ಕೂಡ ನಡೆಸುವುದಿಲ್ಲ ಎಂದು ಹೇಳಿದರು.

ಬಿಜೆಪಿ ಬಿಟ್ಟು ಹೋದವರು ಕೆಟ್ಟಿದ್ದಾರೆ: ನಮ್ಮ ಪಕ್ಷದಿಂದ ಹೋದವರು ಕೆಟ್ಟಿದ್ದಾರೆ. ಆದರೆ ಬಿಜೆಪಿಯನ್ನು ಕೆಡಿಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಸಚಿವ ಸಿ.ಟಿ. ರವಿ ಮಾರ್ಮಿಕವಾಗಿ ಹೇಳಿದ್ದಾರೆ. ರಾಜ್ಯ ಬಿಜೆಪಿ ಕಚೇರಿಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿ ಕ್ರಿಯಿಸಿದ ಅವರು, ಕಾಂಗ್ರೆಸ್‌ನಿಂದ ದೇಶಕ್ಕೆ ಭವಿಷ್ಯವಿಲ್ಲ ಎಂದು ನಿರ್ಧರಿಸಿ ಅಲ್ಲಿರುವವರೇ ಪಕ್ಷ ತೊರೆಯಲು ಸಜ್ಜಾಗುತ್ತಿದ್ದಾರೆ. ಹೀಗಿರುವಾಗ ಪಾಪ ಇವರು ಹೋಗಿ ಏನು ಮಾಡುತ್ತಾರೆ ಎಂದು ಪರೋಕ್ಷವಾಗಿ ರಾಜು ಕಾಗೆ ಇತರರಿಗೆ ಟಾಂಗ್‌ ನೀಡಿದರು.

ನಾವಾಗಿಯೇ ಯಾರನ್ನೂ ದೂಡುವ ಕೆಲಸ ಮಾಡುವುದಿಲ್ಲ. ನಮ್ಮ ಪಕ್ಷದ್ದು ಕೂಡುವ ರಾಜಕಾರಣವೇ ಹೊರತು ದೂಡುವ ರಾಜಕಾರಣವಲ್ಲ. ಕೆಲವೊಮ್ಮೆ ಪಕ್ಷ ತೊರೆದು ಹೋಗುತ್ತೇವೆ ಎಂದರೆ ತಡೆಯಲಾಗದು. ಕೆಟ್ಟ ಅನು ಭವವಾಗಿ ವಾಪಸ್‌ ಬಂದವರು ಇದ್ದಾರೆ. ಮಾಜಿ ಸಂಸದ ಎಸ್‌.ಆರ್‌.ವಿಜಯ ಶಂಕರ್‌ ಇದೀಗ ಹಿಂದಿರುಗಿದ್ದಾರೆ ಎಂದು ಹೇಳಿದರು. ರಾಜು ಕಾಗೆ, ಅಶೋಕ್‌ ಪೂಜಾರಿ ಅವರೊಂದಿಗೆ ಸ್ಥಳೀಯವಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಉಮೇಶ್‌ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅವರು ಚರ್ಚಿಸಲಿದ್ದಾರೆ. ಪಕ್ಷದ ಕೋರ್‌ ಕಮಿಟಿ, ಚುನಾವಣಾ ಸಮಿತಿ ಪ್ರಸ್ತಾವ ಸಲ್ಲಿಸಲಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ