ಮತ ಬ್ಯಾಂಕ್‌ ರಕ್ಷೆಗೆ ಬಿಜೆಪಿ ಒತ್ತು

Team Udayavani, Aug 21, 2019, 3:10 AM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಪ್ರಥಮ ಸಂಪುಟ ವಿಸ್ತರಣೆಯಾಗಿದ್ದು, ಲಿಂಗಾಯಿತ ಸಮುದಾಯಕ್ಕೆ ಬರೋಬ್ಬರಿ ಏಳು ಸಚಿವ ಸ್ಥಾನ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಸೇರಿ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್‌, ಶಶಿಕಲಾ ಜೊಲ್ಲೆ ಹಾಗೂ ಮಾಜಿ ಶಾಸಕ ಲಕ್ಷಣ ಸವದಿ ಸಚಿವರಾಗಿದ್ದಾರೆ. ಆ ಮೂಲಕ ಪಕ್ಷವನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಾ ಬಂದಿರುವ ಸಮುದಾಯವನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಕಸರತ್ತು ನಡೆಸಿದಂತಿದೆ.

ಸಂಪುಟ ವಿಸ್ತರಣೆ ವೇಳೆ ಪರಿಶಿಷ್ಟ ಜಾತಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ತಲಾ ಮೂರು, ಹಿಂದುಳಿದ ವರ್ಗಕ್ಕೆ ಎರಡು ಹಾಗೂ ಬ್ರಾಹ್ಮಣ, ಪರಿಶಿಷ್ಟ ಪಂಗಡಕ್ಕೆ ತಲಾ ಒಂದು ಸಚಿವ ಸ್ಥಾನ ನೀಡುವ ಮೂಲಕ ಜಾತಿ ಪ್ರಾತಿನಿಧ್ಯವನ್ನು ಸರಿದೂಗಿಸುವ ಲೆಕ್ಕಾಚಾರ ನಡೆಸಲಾಗಿದೆ. ಮುಂದೆ ಎದುರಾಗಲಿರುವ ಉಪಚುನಾವಣೆಗಳು, ಒಂದೊಮ್ಮೆ ಬದಲಾದ ಸನ್ನಿವೇಶದಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾದರೆ, ಇಲ್ಲವೇ ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಸಜ್ಜುಗೊಳಿಸುವ ಕಾರ್ಯತಂತ್ರ ಹೆಣೆದಂತಿದೆ.

ಲಿಂಗಾಯಿತ ಮತಬ್ಯಾಂಕ್‌ ರಕ್ಷೆ: ರಾಜ್ಯದಲ್ಲಿ ಎರಡೂವರೆ, ಮೂರು ದಶಕಗಳಿಂದ ಲಿಂಗಾಯಿತ ಸಮುದಾಯವು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ಉಡುಪಿ, ದಕ್ಷಿಣ ಕನ್ನಡ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಲಿಂಗಾಯಿತ ಮತದಾರರ ನೆಲೆಯಿದೆ. ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಆ ಸಮುದಾಯದ ಪ್ರಾತಿನಿಧ್ಯವಿದೆ. ಹಾಗಾಗಿ, ಸಹಜವಾಗಿಯೇ ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ. ಹಿಂದಿನಂತೆ ಮುಂದೆಯೂ ಪಕ್ಷವನ್ನು ಬೆಂಬಲಿಸಿ ಬೆಳಸಲಿ ಎಂಬ ಉದ್ದೇಶದಿಂದಲೇ ಹೆಚ್ಚು ಸಚಿವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಪಕ್ಷ ಸಂಘಟನೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದ ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆ ದೃಷ್ಟಿಯಿಂದ ಒಕ್ಕಲಿಗ ಸಮುದಾಯಕ್ಕೆ ಮೂರು ಸಚಿವ ಸ್ಥಾನ ನೀಡಿದಂತಿದೆ. ಬೆಂಗಳೂರಿನ ಆರ್‌.ಅಶೋಕ್‌ ಹಾಗೂ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಜತೆಗೆ ಚಿಕ್ಕಮಗಳೂರಿನ ಸಿ.ಟಿ.ರವಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬೆಂಗಳೂರು ಸೇರಿ ಒಕ್ಕಲಿಗರ ಪ್ರಾಬಲ್ಯವಿರುವ ಕಡೆ ಪಕ್ಷ ಸಂಘಟನೆಗೆ ಒತ್ತು ನೀಡುವುದು ಬಿಜೆಪಿ ನಾಯಕರ ಉದ್ದೇಶದಂತಿದೆ.

ಪರಿಶಿಷ್ಟ ಸಮುದಾಯಕ್ಕೂ ಆದ್ಯತೆ: ಈಚಿನ ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಬಿಜೆಪಿಯತ್ತ ವಾಲುತ್ತಿದ್ದಾರೆ ಎಂಬ ಮಾತಿದೆ. ಆ ಸಮುದಾಯವನ್ನು ಇನ್ನಷ್ಟು ಸೆಳೆದು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಪರಿಶಿಷ್ಟ ಜಾತಿ, ಪಂಗಡದ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಪರಿಶಿಷ್ಟ ಜಾತಿಯ ಮಾದಿಗ (ಗೋವಿಂದ ಕಾರಜೋಳ), ಲಂಬಾಣಿ (ಪ್ರಭು ಚೌಹಾಣ್‌) ಸಮುದಾಯದ ಜತೆಗೆ ಛಲವಾದಿ ಸಮುದಾಯದ (ಎಚ್‌.ನಾಗೇಶ್‌) ತಲಾ ಒಬ್ಬರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಜತೆಗೆ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರಾದ ಬಿ.ಶ್ರೀರಾಮುಲು ಅವರಿಗೆ ಅವಕಾಶ ನೀಡಿ ಸಮಾನ ಆದ್ಯತೆ ನೀಡುವ ಕಸರತ್ತು ನಡೆಸಲಾಗಿದೆ. ಭೋವಿ ಸಮುದಾಯಕ್ಕೆ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಪಸ್ವರವೂ ಇದೆ.

ಲೋಕಸಭಾ ಗೆಲುವಿಗೆ ಉಡುಗೊರೆ: ನೂತನ ಸಚಿವರ ಆಯ್ಕೆಗೆ ಜಾತಿ, ಜಿಲ್ಲೆ- ಪ್ರಾದೇಶಿಕತೆಯ ಪ್ರಾತಿನಿಧ್ಯವಿದ್ದಂತೆ ಕಂಡು ಬಂದರೂ ಆಯ್ದ ಸಮುದಾಯಗಳ ಕೊಡುಗೆಯನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ ಬೆಂಬಲಿತ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ ಸೇರಿದಂತೆ ಬಿಜೆಪಿಯ 26 ಮಂದಿ ಜಯ ಗಳಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಾದ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದೆ. ಬಿಜೆಪಿಯ ಅಪೂತಪೂರ್ವ ಗೆಲುವಿಗೆ ಲಿಂಗಾಯಿತ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮತದಾರರ ಕೊಡುಗೆ ದೊಡ್ಡದಿದ್ದು, ಅದರಂತೆ ಸಂಪುಟದಲ್ಲಿ ಆದ್ಯತೆ ಕಲ್ಪಿಸಲಾಗಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಒಕ್ಕಲಿಗ ಸಮುದಾಯಕ್ಕೂ ಒತ್ತು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಚುನಾವಣೆ ಲಾಭದ ಲೆಕ್ಕ: ರಾಜ್ಯದಲ್ಲಿ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. 17 ಶಾಸಕರು ಅನರ್ಹಗೊಂಡ ಹಿನ್ನೆಲೆಯಲ್ಲಿ ವಿಧಾನಸಭೆಯ ಒಟ್ಟು ಸಂಖ್ಯಾಬಲ ಇಳಿಕೆಯಾದ ಪರಿಣಾಮ 105 ಸದಸ್ಯ ಬಲದ ಬಿಜೆಪಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಿದೆ. ಅನರ್ಹಗೊಂಡ ಶಾಸಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಹಾಗಾಗಿ, ಮುಂದೆ ಉಪಚುನಾವಣೆಗಳು ಎದುರಾದರೆ ಆ ಎಲ್ಲ ಚುನಾವಣೆ ಗೆಲ್ಲುವುದು ಬಿಜೆಪಿಗೆ ಅನಿವಾರ್ಯ. ಹಾಗಾಗಿ, ದೈನಂದಿನ ಆಡಳಿತವನ್ನು ಸುಗಮವಾಗಿ ನಡೆಸಲು ಹಾಗೂ ಪಕ್ಷ ಬಲವರ್ಧನೆ ದೃಷ್ಟಿಯಿಂದ ಸಂಪುಟ ವಿಸ್ತರಿಸಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ಮೈತ್ರಿ ಸರ್ಕಾರ ಪತನವಾದ ಬಳಿಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಮಾತು ಆಗಾಗ್ಗೆ ಕೇಳಿ ಬರುತ್ತಿದೆ. ಅನಿರೀಕ್ಷಿತ ಬೆಳವಣಿಗೆಯಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಸಮರ್ಥವಾಗಿ ಎದುರಿಸಿ ಸ್ವಂತ ಬಲದ ಸರ್ಕಾರ ರಚಿಸುವ ದೂರದೃಷ್ಟಿಯೂ ಇದೆ. ಸರ್ಕಾರ ಬಾಕಿಯಿರುವ ಅವಧಿಯನ್ನು ಪೂರ್ಣಗೊಳಿಸಿದರೂ ಸಾರ್ವತ್ರಿಕ ಚುನಾವಣೆಯಲ್ಲಿ ಯಶಸ್ಸು ಸಿಗುವಂತಾಗಬೇಕು ಎಂಬ ಲೆಕ್ಕಾಚಾರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗಿದೆ. ಮುಂದೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಇದೇ ದೃಷ್ಟಿಕೋನದಲ್ಲೇ ಹಂಚಿಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

* ಎಂ. ಕೀರ್ತಿಪ್ರಸಾದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ