ಮಹಾ ಪುಂಡರಿಂದ ಗಡಿ ಹುಣ್ಣು ಕೆರೆದು ಗಾಯ
Team Udayavani, Dec 31, 2019, 3:10 AM IST
ಬೆಳಗಾವಿ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರ ಬರುತ್ತಿದ್ದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಿವಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಇದರಲ್ಲಿ ವಿಶೇಷ ಆಸಕ್ತಿ ವಹಿಸಿರುವುದು ದಶಕಗಳ ವಿವಾದಕ್ಕೆ ಹೆಚ್ಚಿನ ಶಕ್ತಿ ಬಂದಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಆರು ದಶಕಗಳ ಇತಿಹಾಸ ಇದೆ. ಕರ್ನಾಟಕದಲ್ಲಿ ಬೀದರ, ಕಲಬುರಗಿ, ವಿಜಯಪುರ ಜಿಲ್ಲೆಗಳು ಮಹಾರಾಷ್ಟ್ರದ ಗಡಿ ಹಂಚಿಕೊಂಡಿದ್ದರೂ ಬೆಳಗಾವಿ ಜಿಲ್ಲೆಯ ಗಡಿ ವಿಷಯ ಮಾತ್ರ ಸದಾ ವಿವಾದಕ್ಕೆ ಗುರಿಯಾಗುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಹಾಗೆ ನೋಡಿದರೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಹಳ್ಳಿಗಳು ಬಹಳ ಹಿಂದುಳಿದ ಪ್ರದೇಶಗಳೇನಲ್ಲ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಸಾಕಷ್ಟು ಸುಧಾರಣೆ ಕಂಡಿವೆ. ರಸ್ತೆಗಳಿಗೆ ಹೊಸ ರೂಪ ಬಂದಿವೆ. ಸರ್ಕಾರಿ ಮರಾಠಿ ಶಾಲೆಗಳು ಚೆನ್ನಾಗಿಯೇ ನಡೆದಿವೆ. ಸಮೃದ್ಧ ಕೃಷಿ ಭೂಮಿ ಸಹ ಹೊಂದಿವೆ. ಆದರೆ ಅದೇ ಸ್ಥಿತಿ ಮಹಾರಾಷ್ಟ್ರದಲ್ಲಿನ ಗಡಿ ಭಾಗದ ಹಳ್ಳಿಗಳಲ್ಲಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಪದೇಪದೆ ಗಡಿ ವಿವಾದ ಕೆಣಕ್ಕುತ್ತಿರುವುದು ಸಾಕಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ಗಡಿ ವಿವಾದದ ವಿಷಯದಲ್ಲಿ ಯಾವಾಗಲೂ ಬೆಳಗಾವಿ ಪ್ರದೇಶವನ್ನು ಮುಂದೆ ಮಾಡುವ ಎಂಇಎಸ್ ನಾಯಕರು ರಾಜಕೀಯ ಹಾಗೂ ಆರ್ಥಿಕವಾಗಿ ಸಾಕಷ್ಟು ಲಾಭ ಉಂಡಿದ್ದಾರೆ. ಜನಸಾಮಾನ್ಯರಿಗಂತೂ ಇದರ ಬಗ್ಗೆ ಆಸಕ್ತಿಯೇ ಇಲ್ಲ. ಆದರೆ ಇಲ್ಲಿನ ರಾಜಕೀಯ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಯುವಕರನ್ನು ಮೋಡಿ ಮಾಡುತ್ತಲೇ ಇದ್ದಾರೆ. ಇದಕ್ಕೆ ಕರ್ನಾಟಕ ಸರ್ಕಾರ ಹಾಗೂ ಇಲ್ಲಿನ ರಾಜಕೀಯ ನಾಯಕರ ಮೌನ ಸಹ ಸಾಕಷ್ಟು ನೆರವಾಗಿದೆ.
ಸ್ವತಃ ಮಹಾರಾಷ್ಟ್ರದ ಮುಖ್ಯಮಂತ್ರಿಗಳೇ ಬೆಳಗಾವಿಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಹೇಳಿದ ಮೇಲೂ ಇದುವರೆಗೆ ರಾಜ್ಯದ ರಾಜಕಾರಣಿಗಳು ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಯಾವೊಬ್ಬ ನಾಯಕರು ತುಟಿ ಬಿಚ್ಚದೇ ಮೌನವಾಗಿರುವುದು ಕನ್ನಡಿಗರ ಆಕ್ರೋಶ ಹೆಚ್ಚಿಸಿದೆ.
ಅಧೋನಿ, ರಾಯದುರ್ಗ ಕಳೆದುಕೊಂಡಿದ್ದೇವೆ: ಕರ್ನಾಟಕಕ್ಕೆ ಹೊಂದಿಕೊಂಡಂತೆ ಕೇರಳ, ಅಖಂಡ ಆಂಧ್ರ ರಾಜ್ಯಗಳಲ್ಲಿ ಗಡಿ ವಿವಾದ ಇತ್ತಾದರೂ ಅದು ಅಷ್ಟು ತೀವ್ರತೆ ಪಡೆದುಕೊಳ್ಳಲಿಲ್ಲ. 1952ರಲ್ಲಿ ಬಳ್ಳಾರಿ ಹೋರಾಟ ನಡೆದಾಗ ಅಧೋನಿ ಹಾಗೂ ರಾಯದುರ್ಗ ಆಂಧ್ರಪ್ರದೇಶದ ಪಾಲಾದವು. ಮಂಗಳೂರಿನ ಗಡಿ ಭಾಗದಲ್ಲಿರುವ ಕಾಸರಗೋಡು ಕೇರಳಕ್ಕೆ ಹೋಯಿತು. ಆಗ ನಮ್ಮ ಸರ್ಕಾರಗಳು ಇದಕ್ಕೆ ಯಾವುದೇ ರೀತಿಯ ಬಲವಾದ ಪ್ರತಿರೋಧ ತೋರಲಿಲ್ಲ.
ಈ ಪ್ರದೇಶಗಳಲ್ಲಿ ಗಡಿ ವಿವಾದ ಸಂಪೂರ್ಣ ಮರೆಯಾಗಿ ಹೋಯಿತು. ಆದರೆ ಬೆಳಗಾವಿ ವಿಷಯದಲ್ಲಿ ಈ ರೀತಿ ಆಗಲಿಲ್ಲ. 1967ರಲ್ಲಿ ಮಹಾಜನ ವರದಿ ಬಂದ ನಂತರ ಮಹಾರಾಷ್ಟ್ರ ಸರ್ಕಾರ ಇದನ್ನು ಒಪ್ಪದೆ ಗಡಿ ವಿವಾದ ಜೀವಂತವಾಗಿಡಲು ಮುಂದಾಯಿತು. ಈ ವರದಿ ಬಳಿಕ ಗಡಿ ವಿಷಯಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾದರು. ಮುಂದೆ ಅದುವೇ ಅವರಿಗೆ ದೊಡ್ಡ ಬಂಡವಾಳವಾಯಿತು.
1957ರಿಂದ ಗಡಿ ವಿಷಯವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಆಗ ಬೆಳಗಾವಿ, ಬಾಗೇವಾಡಿ, ಖಾನಾಪುರ, ನಿಪ್ಪಾಣಿ, ಬೀದರ, ಉಚಗಾಂವ ಸೇರಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುತ್ತ ಬಂದರು. ಯಾವಾಗ ಗಡಿ ವಿಷಯದಿಂದ ರಾಜಕೀಯ ಲಾಭ ಸಿಗಲು ಆರಂಭವಾಯಿತೋ ಅಂದಿನಿಂದ ಅವರು ಅದನ್ನೇ ಬಂಡವಾಳ ಮಾಡಿಕೊಂಡರು. ದುರ್ದೈವ ಎಂದರೆ ಕನ್ನಡಿಗರು ಮಹಾರಾಷ್ಟ್ರದ ಸೊಲ್ಲಾಪುರ, ಜತ್ತ ಹಾಗೂ ಅಕ್ಕಲಕೋಟೆಗಳಲ್ಲಿ ಚುನಾವಣೆ ಗೆಲ್ಲುತ್ತ ಬಂದರೂ ನಮ್ಮವರು ಅಲ್ಲಿಗೆ ಹೋಗಿ ಅಲ್ಲಿನ ಕನ್ನಡಿಗರ ಪರ ಧ್ವನಿ ಎತ್ತಲಿಲ್ಲ.
ಎಲ್ಲವನ್ನು ಕಳೆದುಕೊಂಡ ಎಂಇಎಸ್: ಗಡಿ ವಿವಾದ 1999ರ ಚುನಾವಣೆಯವರೆಗೆ ಜೀವಂತವಾಗಿತ್ತು. 2004ರಿಂದ ಚಿತ್ರ ಬದಲಾಯಿತು. ಬೀದರ, ಭಾಲ್ಕಿ, ಕಾರವಾರ, ಖಾನಾಪುರ, ನಿಪ್ಪಾಣಿ ಮೊದಲಾದ ಕ್ಷೇತ್ರಗಳು ಅವರ ಕೈಬಿಟ್ಟು ಹೋದವು. 1957ರಿಂದ 1999ರವರೆಗೆ ಬೆಳಗಾವಿ ಮೇಲೆ ಹಿಡಿತ ಹೊಂದಿದ್ದ ಎಂಇಎಸ್ಗೆ 2004ರಲ್ಲಿ ಬೆಳಗಾವಿಯ ಜನ ಪಾಠ ಕಲಿಸಿದರು. 1999ರ ನಂತರ ಇದುವರೆಗೆ ನಾವು ಬೆಳಗಾವಿ ವಿಧಾನಸಭಾ ಕ್ಷೇತ್ರವನ್ನು ಎಂಇಎಸ್ಗೆ ಬಿಟ್ಟು ಕೊಟ್ಟಿಲ್ಲ. ಇದು ನಮ್ಮ ಸಾಧನೆ ಎನ್ನುತ್ತಾರೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.
ಬೆಳಗಾವಿ ಗೆಲ್ಲುತ್ತ ಬಂದಿದ್ದೇವೆ. ಹೀಗಾಗಿ ಬೆಳಗಾವಿ ನಮ್ಮದು ಎಂದು ವಾದ ಮಾಡುತ್ತಲೇ ಬಂದಿದ್ದ ಎಂಇಎಸ್ 2004ರ ಚುನಾವಣೆಯಲ್ಲಿ ಎಲ್ಲವನ್ನೂ ಕಳೆದುಕೊಂಡಿತು. ಇದೇ ಸ್ಥಿತಿ ಮುಂದುವರಿದರೆ ನಾವು ಅಸ್ತಿತ್ವದಲ್ಲೇ ಇರುವುದಿಲ್ಲ ಎಂಬುದನ್ನು ಮನಗಂಡ ಎಂಇಎಸ್ ನಾಯುಕರು, ರಾಜಕೀಯವಾಗಿ ಸಂಪೂರ್ಣ ಸೋತ ನಂತರ ಗಡಿ ವಿವಾದವನ್ನು ಜೀವಂತವಾಗಿಡಲು ಸುಪ್ರೀಂ ಕೋರ್ಟ್ ಕದ ತಟ್ಟಿದರು.
ಎಂಇಎಸ್, ಶಿವಸೇನೆ ನಾಟಕ ಏನು?: ರಾಜಕೀಯ ಲಾಭಕ್ಕಾಗಿ ಎಂಇಎಸ್ ಹಾಗೂ ಶಿವಸೇನೆ ಆಡುವ ನಾಟಕ ಇದು. ರಾಜಕೀಯ ಹಾಗೂ ಆರ್ಥಿಕ ಲಾಭದ ಆಸೆ ಇರದೇ ಇದ್ದರೆ ಈ ಗಡಿ ವಿಷಯ ಎಂದೋ ಸತ್ತು ಹೋಗಿರುತ್ತಿತ್ತು. ಅವರ ಕೀಳುಮಟ್ಟದ ರಾಜಕೀಯದ ಆಟಕ್ಕೆ ಮುಗ್ಧ ಮರಾಠಿ ಭಾಷಿಕರು ಬಲಿಯಾಗುತ್ತಿದ್ದರೆ ಇನ್ನೊಂದು ಕಡೆ ನಮ್ಮವರೇ ರಾಜಕೀಯ ನಾಯಕರು ತೆರೆಮರೆ ಯಲ್ಲಿ ಈ ಆಟಕ್ಕೆ ಸಹಾಯ ಹಸ್ತ ಚಾಚುತ್ತಿದ್ದಾರೆ ಎಂಬುದು ಕನ್ನಡ ಮುಖಂಡರ ನೇರ ಆರೋಪ.
ಗಡಿ ಪ್ರಾಧಿಕಾರಗಳು ಎಲ್ಲಿವೆ: ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿ ಹಾಗೂ ಅಲ್ಲಿನ ಕನ್ನಡಿಗರ ಹಿತ ಕಾಯುವ ಉದ್ದೇಶದಿಂದ ಸರ್ಕಾರ ರಚನೆ ಮಾಡಿರುವ ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ನಿಷ್ಕ್ರಿಯವಾಗಿವೆ. ಈ ಮೂರಕ್ಕೂ ಯಾರು ಅಧ್ಯಕ್ಷರು, ಸದಸ್ಯರು ಯಾರು ಎಂಬುದು ಗೊತ್ತೇ ಇಲ್ಲ. ಈ ರೀತಿ ನಮ್ಮ ವ್ಯವಸ್ಥೆ ಇರುವಾಗ ಮಹಾರಾಷ್ಟ್ರದ ವಿರುದ್ಧ ಟೀಕೆ ಮಾಡಿದರೆ ಪ್ರಯೋಜನ ಇಲ್ಲ ಎಂಬುದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಆರೋಪ.
ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗಡಿ ಸಂರಕ್ಷಣಾ ಆಯೋಗದ ಅಸ್ತಿತ್ವದ ಬಗ್ಗೆ ಕರ್ನಾಟಕದವರಿಗೇ ಗೊತ್ತಿಲ್ಲ. ಇನ್ನು ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಹೇಗೆ ಗೊತ್ತಾಗಬೇಕು? ಈ ಆಯೋಗ ಹಾಗೂ ಪ್ರಾಧಿಕಾರಗಳಿಗೆ ರಾಜಕೀಯ ಮುಖಂಡರ ಬದಲು ತಜ್ಞರು ಅಥವಾ ಅನುಭವಸ್ಥರನ್ನು ನೇಮಿಸಬೇಕು.
-ಡಿ.ಎಸ್. ಚೌಗಲೆ, ಸಾಹಿತಿ, ಗಡಿ ಪ್ರದೇಶದ ಚಿಂತಕ
* ಕೇಶವ ಆದಿ