ಕೈನಲ್ಲೂ ಅಧ್ಯಕ್ಷರ ಬದಲಾವಣೆ ಮಾತು ಶುರು

ಚುನಾವಣಾ ಫ‌ಲಿತಾಂಶ ಬಂದ ನಂತರ ಸ್ಥಾನ ಪಲ್ಲಟದ ಬೇಡಿಕೆ ಸಾಧ್ಯತೆ

Team Udayavani, May 22, 2019, 6:00 AM IST

ಬೆಂಗಳೂರು: ಲೋಕಸಭೆ ಚುನಾವಣೆ ಫ‌ಲಿತಾಂಶ ಹೊರ ಬೀಳುವ ಮೊದಲೇ ಕಾಂಗ್ರೆಸ್‌ನಲ್ಲಿ ಸ್ಥಾನ ಪಲ್ಲಟದ ಗಾಳಿ ಬೀಸತೊಡಗಿದೆ. ಕಾಂಗ್ರೆಸ್‌ನಲ್ಲೂ ಫ‌ಲಿತಾಂಶ ಆಧರಿಸಿ ಅಧ್ಯಕ್ಷರ ಬದಲಾವಣೆಯ ಧ್ವನಿ ಮೊಳಗುವ ಬಗ್ಗೆ ಪಕ್ಷದ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳ ಫ‌ಲಿತಾಂಶ ಹೊರ ಬಿದ್ದಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಪಕ್ಷಗಳು ಸಾಧನೆ ತೃಪ್ತಿಕರವಾಗಿಲ್ಲದಿರುವುದು ಪಕ್ಷದ ಅನೇಕ ನಾಯಕರ ಬೇಸರಕ್ಕೆ ಕಾರಣವಾಗಿದೆ. ಇದೇ ವಿಷಯವನ್ನು ಮುಂದಿಟ್ಟು ಕೊಂಡು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕ ಮಾಂಡ್‌ ಮುಂದೆ ಬೇಡಿಕೆ ಇಡುವ ಬಗ್ಗೆಯೂ ಪಕ್ಷದ ಒಂದು ವರ್ಗ ಆಲೋಚನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆಂಬ ಆರೋಪ ಅವರ ವಿರುದ್ಧ ಕೇಳಿ ಬರುತ್ತಿದೆ. ಅಲ್ಲದೇ ರಾಜ್ಯಾಧ್ಯಕ್ಷರಾಗಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬ ಮಾತುಗಳು ಪಕ್ಷದ ಸಿದ್ದರಾಮಯ್ಯ ವಿರೋಧಿ ಬಣದಲ್ಲಿ ಕೇಳಿ ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಹತ್ತಕ್ಕಿಂತ ಕಡಿಮೆ ಸ್ಥಾನ ತೆಗೆದುಕೊಂಡರೆ, ಅದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿ, ಚುನಾವಣಾ ಫ‌ಲಿತಾಂಶ ಬಂದ ನಂತರ ಅವರ ಬದಲಾವಣೆಗೆ ಕೂಗು ಕೇಳುವ ಸಾಧ್ಯತೆಯಿದೆ.

ಕಳೆದ ಬಾರಿಯೇ ಅಧ್ಯಕ್ಷರ ಬದಲಾವಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಇಡಲಾಗಿತ್ತು. ಆದರೆ, ಹೈ ಕಮಾಂಡ್‌ ಸಿದ್ದರಾಮಯ್ಯ ಆಸೆಯಂತೆ ದಿನೇಶ್‌ ಗುಂಡೂರಾವ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಈಗ ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯವಾಗಿರುವುದರಿಂದ ಅವರ ಬದಲಾವಣೆ ಮಾಡಿದರೆ, ಬಿಜೆಪಿಯಲ್ಲಿ ಲಿಂಗಾಯತ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವ ನಾಯಕತ್ವ ಇಲ್ಲ ಎನ್ನುವುದನ್ನೇ ಮುಂದಿಟ್ಟು ಈ ಬಾರಿ ಕಾಂಗ್ರೆಸ್‌ನಿಂದ ಲಿಂಗಾಯತ ಸಮು ದಾಯದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ, ಪಕ್ಷವನ್ನು ಬಲಗೊಳಿಸಲು ಅನುಕೂಲವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇ ಕಾರಣಕ್ಕೆ ಈ ಬಾರಿ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂಚೂಣಿಗೆ ಬರುವ ಸಾಧ್ಯತೆ ಇದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಕೂಗು ಕೇಳಿ ಬಂದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್, ಗೃಹ ಸಚಿವ ಎಂ.ಬಿ. ಪಾಟೀಲ್ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೆಸರು ಮುಂಚೂಣಿಯಲ್ಲಿ ಕೇಳಿ ಬರುವ ಸಾಧ್ಯತೆಯಿದೆ.

ಆದರೆ, ಚುನಾವಣಾ ಫ‌ಲಿತಾಂಶ ಬಂದ ತಕ್ಷಣ ಅಧ್ಯಕ್ಷರ ಸ್ಥಾನ ಬದಲಾವಣೆ ಮಾಡುವುದು ಅನುಮಾನ ಎಂಬ ಮಾತುಗಳು ದಿನೇಶ್‌ ಗುಂಡೂರಾವ್‌ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ. ಮೇ 23ರ ಲೋಕಸಭಾ ಫ‌ಲಿತಾಂಶ ಬಂದ ನಂತರ ಅಧಿಕೃತ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದ್ದು, ಈ ಬೆಳವಣಿಗೆಗೆ ಕಾಂಗ್ರೆಸ್‌ ಹೈಕಮಾಂಡ್‌ ಹೇಗೆ ಸ್ಪಂದಿಸುತ್ತದೆ ಎನ್ನುವುದು ಕೂಡ ಮುಖ್ಯವಾಗಿದೆ.

ನಾನು ಯಾವತ್ತೂ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ನನಗೆ ಮಂತ್ರಿ ಸ್ಥಾನವೂ ಬೇಡ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಈಗ ಚುನಾವಣೆ ಫ‌ಲಿತಾಂಶ ಬಂದ ಮೇಲೆ ನಿರೀಕ್ಷಿತ ಫ‌ಲಿತಾಂಶ ಏನೇ ಬಂದರೂ ನಾನು ಜವಾಬ್ದಾರಿ ಹೊರಲು ಸಿದ್ಧನಿದ್ದೇನೆ. ನಾನು ಯಾವತ್ತೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಿಲ್ಲ. ನಮ್ಮ ನಿರೀಕ್ಷೆಗೆ ತಕ್ಕಷ್ಟು ಸ್ಥಾನಗಳು ಬರುವ ವಿಶ್ವಾಸ ಇದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

● ಶಂಕರ ಪಾಗೋಜಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ