ಮೈತ್ರಿ ಉರುಳಿಸಲು ಕ್ಲಬ್, ಬೆಟ್ಟಿಂಗ್ ಹಣ
Team Udayavani, Nov 25, 2019, 3:07 AM IST
ಬೆಂಗಳೂರು: ಬಿಜೆಪಿಯವರು ಮೈತ್ರಿ ಸರ್ಕಾರ ಉರುಳಿಸಲು ನೈಟ್ ಕ್ಲಬ್ ಹಾಗೂ ಕ್ರಿಕೆಟ್ ಬೆಟ್ಟಿಂಗ್ ನಡೆಸುವವರಿಂದ ಹಣ ಸಂಗ್ರಹಿಸಿ ಅನರ್ಹ ಶಾಸಕರಿಗೆ ಕೊಟ್ಟಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಯಶವಂಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚನೆ ಮಾಡಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್ ಹಾಗೂ ನೈಟ್ ಕ್ಲಬ್‌ಗಳನ್ನು ನಿಲ್ಲಿಸಲು ಕ್ರಮ ಕೈಗೊಂಡಿದ್ದೆ. ಈಗ ಅದನ್ನು ಪುನರ್ ಪ್ರಾರಂಭಿಸಲು ಸಹಾಯ ಮಾಡುವುದಾಗಿ ಬಿಜೆಪಿಯವರು ದಂಧೆಕೋರರಿಗೆ ಭರವಸೆ ನೀಡಿ ಹಣ ವಸೂಲಿ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಸರ್ಕಾರವನ್ನು ಪುನಃ ಅಧಿಕಾರಕ್ಕೆ ತರುತ್ತೇವೆಂದು 17 ಶಾಸಕರಿಗೆ ಆಮಿಷ ಒಡ್ಡಿ ಮೈತ್ರಿ ಸರ್ಕಾರವನ್ನು ತೆಗೆದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣಾ ಪ್ರಚಾರದಲ್ಲಿ ಅಭಿವೃದ್ಧಿ ಪರ ಮಾತನಾಡದೇ ಅನರ್ಹರಿಗಾಗಿ ಪ್ರಾಣ ಕೊಡುವುದಾಗಿ ಹೇಳಿದ್ದಾರೆ. ಅವರು ಪ್ರಾಣ ಕೊಡಬೇಕಾಗಿರುವುದು ಈ ರಾಜ್ಯದ ಜನರ ಸಮಸ್ಯೆಗಳಿಗಾಗಿ, ಆದರೆ ಇವರು ಆಮಿಷಕ್ಕೆ ಒಳಗಾಗಿರುವ ಶಾಸಕರಿಗಾಗಿ ಪ್ರಾಣ ಕೊಡುವುದಾಗಿ ಹೇಳಿದ್ದಾರೆ.
ಇಂತಹ ಮುಖ್ಯಮಂತ್ರಿ ಬೇಕಾ ಎಂದು ಪ್ರಶ್ನಿಸಿದರು. ಇನ್ನೊಂದೆಡೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನನ್ನ ಸಮುದಾಯ ಏನಾದರೂ ಆಗಲಿ ಬೇರೆಯವರು ಗೆಲ್ಲಲಿ ಎಂದು ಹೇಳುತ್ತಾರೆ. ಇವರು ಎಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ನೋಡಿ. ನಾನು ಯಾವತ್ತೂ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ ಎಂದರು.
ಯಶವಂತಪುರ ಕ್ಷೇತ್ರದಲ್ಲಿ ಪೊಲೀಸ್ ಅಧಿಕಾರಿಗಳು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಆ ವ್ಯಕ್ತಿ ಗುಲಾಮನಂತೆ ಜನರನ್ನು ಹೆದರಿಸಿ ಬಿಜೆಪಿಗೆ ಮತ ಹಾಕುವಂತೆ ಹೇಳುತ್ತಿದ್ದಾನೆ. ಇದು ಸರಿಯಲ್ಲ. ನಾನು ಇನ್ನೂ ಬದುಕಿದ್ದೇನೆ. ನಾನು ಅಧಿಕಾರದಲ್ಲಿ ಇಲ್ಲದೇ ಇರಬಹುದು. ಕಾನೂನಿನ ಮೂಲಕ ಯಾವ ರೀತಿ ಹೋರಾಟ ಮಾಡಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಹೇಳಿದರು.
ಡಿ.9 ನಂತರ ಯಾವ ಸರ್ಕಾರ?: ತಾವು ಹಿಂದೆ ಈ ಸರ್ಕಾರ ಪತನವಾಗಲು ಬಿಡುವುದಿಲ್ಲ ಎಂದು ನೀಡಿದ್ದ ಹೇಳಿಕೆಗೆ ಟ್ವಿಸ್ಟ್ ನೀಡಿದ ಎಚ್ ಡಿ ಕೆ, ನಾನು ಸರ್ಕಾರವನ್ನು ಉಳಿಸುತ್ತೇನೆಂದು ಹೇಳಿದ್ದೇನೆ. ಆದರೆ, ಬಿಜೆಪಿ ಸರ್ಕಾರ ಉಳಿಸುತ್ತೇನೆ ಎಂದು ಹೇಳಿಲ್ಲ. ಡಿ.9ರ ನಂತರ ಅದಕ್ಕೆ ಉತ್ತರ ದೊರೆಯಲಿದೆ ಎಂದು ಹೇಳುವ ಮೂಲಕ ಮತ್ತೆ ಬಿಜೆಪಿ, ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಮೂಡಿಸಿದ್ದಾರೆ.
ನಾನು ಯಾವ ಸರ್ಕಾರವನ್ನು ಉಳಿಸುತ್ತೇನೆಂದು ಹೇಳಿಲ್ಲ. ಆದರೆ, ಮತ್ತೆ ಚುನಾವಣೆಗೆ ಹೋಗಲು ಬಿಡುವುದಿಲ್ಲ. ನನ್ನ ಮಾತಿನ ಅರ್ಥವನ್ನು ರಾಜಕೀಯ ಸೂಕ್ಷ್ಮತೆ ಇರುವವರು ಅರ್ಥ ಮಾಡಿಕೊಳ್ಳುತ್ತಾರೆ. ಚುನಾವಣೆ ಫಲಿತಾಂಶದ ನಂತರ ನಾನು ಬಿಜೆಪಿಗೆ ಬೆಂಬಲ ಕೊಡುತ್ತೇನೋ, ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇನೋ ಎನ್ನುವ ಪ್ರಶ್ನೆಗಳಿಗೆ ಡಿ.9 ರ ನಂತರ ಉತ್ತರ ದೊರೆಯಲಿದೆ ಎಂದು ಹೇಳಿದರು.
ಈ ಮೂಲಕ ಉಪ ಚುನಾವಣೆ ಫಲಿತಾಂಶದ ನಂತರ ನಡೆಯುವ ಬೆಳವಣಿಗೆಗೆ ತಾವು ಎಲ್ಲದಕ್ಕೂ ಸಿದ್ಧ ಎನ್ನುವ ಸಂದೇಶವನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರವಾನಿಸಿದ್ದಾರೆ. ಮೈತ್ರಿ ಸರ್ಕಾರ ಪತನವಾದ ನಂತರ ಕಾಂಗ್ರೆಸ್ ಜೊತೆಗಿನ ಸಂಬಂಧ ಹಳಸಿದರೂ, ಕಾಂಗ್ರೆಸ್‌ನ ಒಂದು ವರ್ಗ ಈಗಲೂ ಜೆಡಿಎಸ್ ಜೊತೆಗೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗುತ್ತಿರುವುದರಿಂದ ಎರಡೂ ಪಕ್ಷಗಳ ಜತೆಗೆ ಅಗತ್ಯ ಬಿದ್ದರೆ ಸಂಬಂಧ ಬೆಳೆಸುವ ಮುನ್ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಸೀದಿಗಳಾದ 30 ಸಾವಿರ ದೇವಾಲಯಗಳಷ್ಟನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್
ದೇಶ ವಿರೋಧಿಗಳ ಮೇಲೆ ನಿಗಾ
ಮತಾಂಧ ಬಾಬರ್ ಮೂಲ ಹಾಗೂ ಇಂದಿರಾ ಗಾಂಧಿ ಮೂಲ ಒಂದೇ ಆಗಿದೆಯೇ: ಸಿದ್ದರಾಮಯ್ಯಗೆ BJP ತಿರುಗೇಟು
ಚಿಕ್ಕಮಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೈದಿ 24 ಗಂಟೆಯೊಳಗೆ ಬಂಧನ
ಹುಣಸೂರು: ಶಾಲೆ ಚಕ್ಕರ್ ಹೊಡೆದು ಈಜಲು ಹೊರಟವ ನೀರುಪಾಲು; ಪ್ರಾಣ ಉಳಿಸದೆ ಓಡಿ ಹೋದ ಸ್ನೇಹಿತರು