ಗೆಲುವಿಗಾಗಿ ಸಿಎಂ ಯಡಿಯೂರಪ್ಪ ಕಾರ್ಯತಂತ್ರ

Team Udayavani, Nov 20, 2019, 5:14 AM IST

ಬೆಂಗಳೂರು: ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವಂತೆ ಸಂಬಂಧಪಟ್ಟ ಉಸ್ತುವಾರಿಗಳು, ಪ್ರಮುಖರು ಪ್ರಯತ್ನ ನಡೆಸಬೇಕು ಎಂದು ಸೂಚನೆ ನೀಡಿರುವ ಸಿಎಂ ಯಡಿಯೂರಪ್ಪ ಅವರು ಮಂಗಳವಾರ ರಾಜಧಾನಿಯಲ್ಲಿದ್ದುಕೊಂಡೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬೇಕಾದ ಕಾರ್ಯತಂತ್ರಗಳನ್ನು ಹೆಣೆಯುವುದರಲ್ಲಿ ಸಕ್ರಿಯರಾಗಿದ್ದರು.

ಹೊಸಕೋಟೆ ಕ್ಷೇತ್ರದ ಬಂಡಾಯ ಅಭ್ಯರ್ಥಿ ಶರತ್‌ ಬಚ್ಚೇಗೌಡ, ವಿಜಯನಗರ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಮತ್ತು ಅಥಣಿ ಕ್ಷೇತ್ರ ದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣ ಕ್ಕಿಳಿದಿರುವ ಬಿಜೆಪಿ ಜಿ. ಪಂ. ಸದಸ್ಯ ಗುರು ದಾಶ್ಯಾಳ್‌ ಅವರ ಮನವೊಲಿಕೆ ಪ್ರಯತ್ನ ನಡೆಸುವಂತೆ ಯಡಿಯೂರಪ್ಪ ಹಿರಿಯ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಉಪ ಚುನಾವಣ ಕಣದಿಂದ ದೂರ ಉಳಿದಿದ್ದ ಮಾಜಿ ಸಚಿವ ಆರ್‌.ರೋಶನ್‌ ಬೇಗ್‌ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಯಡಿಯೂರಪ್ಪ ಅವರು ನಡೆಸಿದ ಮಾತುಕತೆ ಯಶಸ್ವಿಯಾದಂತಿದೆ.

ಸಚಿವ ವಿ.ಸೋಮಣ್ಣ ಅವರೊಂದಿಗೆ ಮಹಾ
ಲಕ್ಷ್ಮೀ ಲೇಔಟ್‌ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಚುನಾವಣ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು. ಹಾಗೆಯೇ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌, ಸಚಿವರಾದ ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ ಅವರೊಂದಿಗೆ ಯಡಿಯೂರಪ್ಪ ಸಮಾಲೋಚನೆ ನಡೆಸಿದರು. ಒಟ್ಟಾರೆ ನಾಮಪತ್ರ ಸಲ್ಲಿಕೆ ಅನಂತರದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಯಡಿಯೂರಪ್ಪ ಅವರು ಸ್ಥಳೀಯ ಪರಿಸ್ಥಿತಿಗೆ ಪೂರಕವಾಗಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗುತ್ತಿದ್ದಂತೆ ಎಲ್ಲ ಕ್ಷೇತ್ರಗಳಲ್ಲೂ ಬಿರುಸಿನ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ