ಕರಾವಳಿ ಜಾನಪದ ಜಾತ್ರೆ : ಗಮನಸೆಳೆದ ಜಾನಪದ ಮೆರವಣಿಗೆ
Team Udayavani, Mar 1, 2021, 4:50 AM IST
ಪುರಭವನ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ದ.ಕ. ಜಿಲ್ಲಾ ಘಟಕ ಮಂಗಳೂರು ವತಿಯಿಂದ ಕರಾವಳಿ ಜಾನಪದ ಜಾತ್ರೆ ರವಿವಾರ ದಿನಪೂರ್ತಿ ಮಂಗಳೂರು ಪುರಭವನದಲ್ಲಿ ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ ಸಭಾ ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಜಾನಪದ ಜಾತ್ರೆಯ ಮೆರವಣಿಗೆ ನಗರದ ನೆಹರೂ ಮೈದಾನದಿಂದ ಪುರಭವನದವರೆಗೂ ವೈಭವದಿಂದ ಸಾಗಿಬಂತು. ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು, ಮೇಯರ್ ದಿವಾಕರ್ ಪಾಂಡೇಶ್ವರ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ತಿಮ್ಮೇಗೌಡ, ದ.ಕ. ಜಿಲ್ಲಾ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲಬೈಲು ಮೊದಲಾದವರು ಉಪಸ್ಥಿತರಿದ್ದರು.
ಎಲ್ಲ ತಾಲೂಕುಗಳಿಂದ ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ತುಳುನಾಡ ವೈಭವ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಿತು. ನೂರಾರು ಮಂದಿ ಜಾನಪದ, ಜಾತ್ರೆಯಲ್ಲಿ ಪಾಲ್ಗೊಂಡರು. ಸಂಜೆ ಸಮಾರೋಪ ಸಮಾರಂಭ ಜರಗಿತು.
ಗಮನ ಸೆಳೆದ ಪ್ರದರ್ಶನ
ಮೆರವಣಿಗೆಯಲ್ಲಿ ಚಿಲಿಪಿಲಿ ಗೊಂಬೆಗಳು, ತುಳುನಾಡಿನ ಹುಲಿವೇಷ, ಕಂಗೀಲು ನೃತ್ಯ, ಚೆಂಡೆ ತಂಡ, ಪುಟಾಣಿ ಮಕ್ಕಳ ಭಜನೆ ತಂಡದ ಪ್ರದರ್ಶನಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರನ್ನು ಮೆರವಣಿಗೆಯ ಮೂಲಕ ಕರೆ ತರಲಾಯಿತು. ತುಳುನಾಡಿನ ಕೈಗಾಡಿ, ಎತ್ತಿನಗಾಡಿ, ಕಂಬಳ, ಕೋಳಿ ಅಂಕ, ಭತ್ತ ಕುಟ್ಟುವುದು, ದೈವಾರಾಧನೆ, ನಾಗಾರಾಧನೆ, ಯಕ್ಷಗಾನ, ಬೆಸ್ತರ ಪ್ರತಿಕೃತಿಗಳು ಜಾನಪದ ಲೋಕದಲ್ಲಿ ಮೆಚ್ಚುಗೆ ಗಳಿಸಿದವು. ಹಿರಿಯರು ತಮ್ಮ ಹಿಂದಿನ ಬದುಕಿನ ವಿಚಾರಗಳನ್ನು ಕಿರಿಯರಿಗೆ ಹೇಳಿಕೊಡುತ್ತಿದ್ದ ದೃಶ್ಯಗಳು ಗಮನಸೆಳೆದವು.