ಕೋವಿಡ್ ಸಮಯದಲ್ಲಿ, ಆಸ್ಪತ್ರೆಗಳಲ್ಲಿ ಹೀಗಿರಲಿ ಬದಲಾವಣೆ…


Team Udayavani, May 31, 2020, 1:44 PM IST

ಕೋವಿಡ್ ಸಮಯದಲ್ಲಿ, ಆಸ್ಪತ್ರೆಗಳಲ್ಲಿ ಹೀಗಿರಲಿ ಬದಲಾವಣೆ…

ಕೋವಿಡ್ ನಿಂದ ಈಗಾಗಲೇ ಪ್ರಪಂಚದಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ವೈದ್ಯನೂ
ಸೇನಾನಿಯಾಗಿಯೇ ಕೋವಿಡ್ ವಿರುದ್ಧ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾನೆ. ಅನೇಕ ಲ್ಯಾಬ್‌ಗಳಲ್ಲಿಯೂ
ಕೋವಿಡ್ ವೈರಸ್‌ ಅಂತ್ಯಕ್ಕೆ ಔಷಧಿ-ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಆದರೆ, ಕೋವಿಡ್ ವೈರಸ್‌ ಇಂದು
ಮರೆಯಾದರೂ ನಾಳೆ ಮತ್ತೂಂದು ಹೆಸರಿನಲ್ಲಿ ಮತ್ತೆ ಜನರನ್ನು ಪೀಡಿಸಬಹುದು. ಅದು ನಮ್ಮ ನಡುವೆಯೇ ಇರಬಹುದು
ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ.

ಕೆಮ್ಮು ಜ್ವರ ಉಸಿರಾಟದ ತೊಂದರೆ ಎನ್ನುವ ಪ್ರಾಥಮಿಕ ಲಕ್ಷಣದಿಂದ ಆರಂಭವಾದ ಕೋವಿಡ್ ಇಂದು ಅನೇಕರಲ್ಲಿ
ಯಾವುದೇ ಲಕ್ಷಣವನ್ನೂ ತೋರಿಸದೆ ಆಕ್ರಮಿಸಿಕೊಳ್ಳುತ್ತಿದೆ. ಅದನ್ನೆದುರಿಸಲು ವಿಜ್ಞಾನ ತಂತ್ರಜ್ಞಾನ ಹೊಸ ಹೊಸ ಬದಲಾವಣೆಯೊಂದಿಗೆ ಅಣಿಯಾಗುತ್ತಿದೆ. ಇದಕ್ಕೆ ವೈದ್ಯಕೀಯ ಕ್ಷೇತ್ರವೂ ಹೊರತಲ್ಲ. ನಾವು ಕೂಡ ಕೋವಿಡ್ ನೊಂದಿಗೆ ಬದಲಾಗಬೇಕಿದೆ.

ಈಗ ಆಸ್ಪತ್ರೆಗಳು ಮೊದಲಿನಂತಿರುವುದಿಲ್ಲ, ಅವುಗಳಲ್ಲೂ ಸಾಕಷ್ಟು ಬದಲಾವಣೆಗಳು ಆಗಬೇಕು.  ಕೋವಿಡ್ ಗೂ ಮುಂಚೆ ಸಣ್ಣ ಪುಟ್ಟ ಸಮಸ್ಯೆ ಇದ್ದರೂ ಆಸ್ಪತ್ರೆಗೆ ಓಡಿ ಬರುತ್ತಿದ್ದ ಜನರು ಈಗ ಖಾಯಿಲೆಬಿದ್ದರೂ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ. ಅವರಿಗೆ ಧೈರ್ಯ ನೀಡಿ ಕರೆತರುವ ಕೆಲಸವಾಗಬೇಕು. ಇನ್ನೊಂದೆಡೆ ವೈದ್ಯರೂ ರೋಗಿಗಳನ್ನು ಮುಟ್ಟಲು ಹೆದರುತ್ತಿದ್ದಾರೆ. ಇಂಥ ಸಮಯದಲ್ಲಿ, ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ
ನಿರ್ದೇಶಕನಾಗಿ ಕೆಲವೊಂದು ಬದಲಾವಣೆಗಳನ್ನು ನಮ್ಮ ಆಸ್ಪತ್ರೆಯಲ್ಲಿ ತಂದಿದ್ದು, ಅವು ಇತರರಿಗೂ ಉಪಯೋಗಕ್ಕೆ ಬರಬಹುದು ಎಂದು ಹಂಚಿ ಕೊಳ್ಳುತ್ತಿದ್ದೇನೆ…

ಸಮಾಲೋಚನೆ, ಪರೀಕ್ಷೆ ಅತಿಮುಖ್ಯ: ಒಬ್ಬ ರೋಗಿ ವೈದ್ಯನಿಂದ ಸಂಪೂರ್ಣ ಚಿಕಿತ್ಸೆ ಪಡೆಯಬೇಕು ಎಂದರೆ ಆತ ವೈದ್ಯನ ಎದುರಿಗೆ ಬರಬೇಕು. ವೈದ್ಯ ಆತನೊಂದಿಗೆ ಕುಳಿತು ಮಾತನಾಡಬೇಕು. ಜೊತೆಗೆ ನೇರವಾಗಿ ರೋಗಿಯನ್ನು ನೋಡುವುದು (ಇನ್ಸ್ ಪೆಕ್ಷನ್‌), ತೊಂದರೆ ಇರುವ ಜಾಗವನ್ನು ಸ್ಪರ್ಶಿಸುವ ಮುಖಾಂತರ ಪರೀಕ್ಷಿಸುವುದು(ಪ್ಯಾಲ್‌ಪೇಷನ್‌), ತಟ್ಟುವುದು(ಪರ್ಕಷನ್‌),
ಸ್ಟೆತಸ್ಕೋಪ್‌ನಿಂದ ಪರಿಶೀಲನೆ (ಆಸ್ಕಲ್‌ಟೇಷನ್‌ ) ಮಾಡಲೇಬೇಕು.

ಈ ವಿಧಾನಗಳು ಇಲ್ಲದಿದ್ದರೆ ರೋಗದ ಬಗ್ಗೆ ಸಂಪೂರ್ಣ ಅರಿವು ಪಡೆಯುವುದಕ್ಕೆ ವೈದ್ಯರಿಗೆ ಸಾಧ್ಯವಾಗುವುದಿಲ್ಲ. ಟೆಲಿಮೆಡಿಸಿನ್‌ ನಿಂದ ಇದನ್ನೆಲ್ಲಾ ಅನುಸರಿಸೋದು ಕಷ್ಟಕರ. ಇನ್ನು ವೈದ್ಯರ ಧೈರ್ಯ ತುಂಬುವ ಹಾಗೂ ಎಚ್ಚರಿಕೆಯ ಮಾತುಗಳು ಚಿಕಿತ್ಸೆಯಲ್ಲಿ ಹೆಚ್ಚಿನ ಪರಿಣಾಮ ಬೀರುತ್ತವೆ. ಹಾಗಾಗಿ, ಈ ರೀತಿಯ ಪ್ರಕ್ರಿಯೆ ಸಾಧ್ಯವಾಗಬೇಕಾದರೆ ಆಸ್ಪತ್ರೆಗಳಲ್ಲಿ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಪೂರ್ವಾಪರ ಮಾಹಿತಿ ಪಡೆಯಿರಿ: ಆಸ್ಪತ್ರೆಗೆ ಬರುವ ರೋಗಿಯೇ ಆಗಲಿ ಅಥವಾ ಆತನ ಸಂಬಂಧಿಗಳೇ ಆಗಲಿ ಅವರ ದೇಹದ
ತಾಪಮಾನವನ್ನು ಪರಿಶೀಲಿಸಿ, ಪೂರ್ವಾಪರ ವಿಚಾರಿಸಿ. ಅವರು ಸರ್ಕಾರ ಘೋಷಿಸಿರುವ ಹಾಟ್‌ಸ್ಪಾಟ್‌ಗಳಿಗೆ ಹೋಗಿದ್ದರಾ?
ಬಫ‌ರ್‌ ಝೊನ್‌ಗಳಲ್ಲಿ ತಿರುಗಾಡಿದ್ದರಾ ಎನ್ನುವ ಮಾಹಿತಿ ಕೂಡ ಪಡೆದುಕೊಳ್ಳಬೇಕು. ರೋಗಿಯಲ್ಲಿ ಏನೆಲ್ಲಾ ಪ್ರಾಥಮಿಕ
ರೋಗಲಕ್ಷಣಗಳಿವೆ ಎನ್ನುವ ಪಟ್ಟಿಯನ್ನು ಇಟ್ಟುಕೊಂಡು ಅದು ಕೋವಿಡ್ ಗೆ ಸಂಬಂಧಿಸಿದ ಲಕ್ಷಣಗಳಿಗೆ ಹೊಂದಾಣಿಕೆ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು. 15-20 ಪ್ರಾಥಮಿಕ ಲಕ್ಷಣಗಳು ಆತನಲ್ಲಿ ಇದ್ದರೆ ಕೂಡಲೇ “ಶಂಕಿತ ಕೋವಿಡ್ ರೋಗಿ’ಯೆಂದು ಪರಿಗಣಿಸಿ ಸರ್ಕಾರಿ ವೈದ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿ, ಆತನಿಗೆ ಧೈರ್ಯ ತುಂಬಿ ಸರ್ಕಾರಿ ಕೋವಿಡ್‌ ಆಸ್ಪತ್ರೆಗೆ ಕಳುಹಿಸಬೇಕು. ಇದನ್ನೆಲ್ಲಾ ಮಾಡಲು ಒಂದು ಫ್ಲೂ ಕ್ಲೀನಿಕ್‌ನ ಅವಶ್ಯಕತೆ ಇರುತ್ತದೆ.

ಫ್ಲೂ ಕ್ಲೀನಿಕ್‌/ಫೀವರ್‌ ಕ್ಲೀನಿಕ್‌ ಸ್ಥಾಪಿಸಿ: ಪ್ರತಿಯೊಂದು ಆಸ್ಪತ್ರೆಯೂ ತನ್ನ ಎಮರ್ಜೆನ್ಸಿ ಅಡ್ಮಿಷನ್‌ (ತುರ್ತುವಿಭಾಗ)ದ ಬಳಿ
ಫ್ಲೂ ಕ್ಲೀನಿಕ್‌/ಫೀವರ್‌ ಕ್ಲೀನಿಕ್‌ ಸ್ಥಾಪಿಸಿಕೊಳ್ಳಬೇಕು. ಇದರಲ್ಲಿ ನುರಿತ ವೈದ್ಯರು ಹಾಗೂ ನರ್ಸ್‌ಗಳು ಪಿಪಿಇ ಕಿಟ್‌ ಸಮೇತ
ಇರಬೇಕು. ತಾಪಮಾನ ಪರಿಶೀಲನೆ ಮಾಡಬೇಕು, ಪಲ್ಸ್‌ ಆಕ್ಸಿಮೀಟರ್‌(ಎಸ್‌ಪಿಒ2)ನಲ್ಲಿ ರೋಗಿಯನ್ನು ಪರಿಶೀಲಿಸಬೇಕು
ಜೊತೆಗೆ ಕೋವಿಡ್ ಸ್ಕೋರಿಂಗ್‌ ಚಾರ್ಟ್‌ನಲ್ಲಿ ಆತನ ರೋಗಲಕ್ಷಣಗಳನ್ನು ಟ್ಯಾಲಿ ಮಾಡುತ್ತಾ ಹೋಗಬೇಕು. ಅಗತ್ಯವಾದಲ್ಲಿ ಸುರಕ್ಷಿತ ಸೌಕರ್ಯಗಳೊಂದಿಗೆ ಮೊಬೈಲ್‌ ಎಕ್ಸರೇ ಇಟ್ಟುಕೊಳ್ಳುವುದೂ ಕ್ಷೇಮಕರ. ಮುಂದಿನ ದಿನಗಳಲ್ಲಿ ಸರ್ಕಾರ ಫೀವರ್‌ ಕ್ಲೀನಿಕ್‌ ಸ್ಥಾಪನೆಯೂ ಕಡ್ಡಾಯ ಎಂದು ಹೇಳಬಹುದು. ಹಾಗಾಗಿ ಆಸ್ಪತ್ರೆಗಳಲ್ಲಿ ಇದಕ್ಕೆಂದೇ ಜಾಗ ಮೀಸಲಿಡುವುದು ಒಳ್ಳೆಯದು.

ಒಪಿಡಿ(ಸಂದರ್ಶನ ಕೊಠಡಿ) ನಿರ್ವಹಣೆ
ಒಪಿಡಿ ವಿಭಾಗದಲ್ಲಿ, ಅಂದರೆ ವೈದ್ಯರು ರೋಗಿಯನ್ನು ಪರಿಶೀಲನೆ ಮಾಡುವಾಗ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ನಾನಿಲ್ಲಿ ಪಟ್ಟಿ ಮಾಡಿದ್ದೇನೆ. ಸಹಜವಾಗಿ ಎಲ್ಲಾ ವಿಭಾಗದಲ್ಲಿಯೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆ ಆದ್ಯತೆಯಾಗಬೇಕು. ಇದರ ಜತೆಗೆ ತಪಾಸಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ವೈದ್ಯರೂ ಫೇಸ್‌
ಗಾರ್ಡ್‌ ಉಪಯೋಗಿಸಬೇಕು. ಉಳಿದಂತೆ…

1)ಕಣ್ಣಿನ ವಿಭಾಗದಲ್ಲಿ ಪರೀಕ್ಷಕಗಳಿಗೆ ಬ್ಯಾರಿಯರ್‌ ಪ್ರಿವೆಂಟ್‌ ಬಳಸಬೇಕು. ವೈದ್ಯರು ಕಣ್ಣನ್ನು ಪರಿಶೀಲಿಸಲು ರೋಗಿಯ ಹತ್ತಿರ
ಹೋಗಬೇಕಾಗುವುದರಿಂದ ಬ್ಯಾರಿಯರ್‌ ಪ್ರಿವೆಂಟ್‌ ಅವಶ್ಯಕ.

2) ದಂತ ವಿಭಾಗ ಈ ಸಮಯದಲ್ಲಿ ಬಹಳಷ್ಟು ಜಾಗರೂಕತೆಯಿಂದ ನಿರ್ವಹಿಸಬೇಕಾದ ವಿಭಾಗ. ರೋಗಿಯ ಬಾಯನ್ನೇ
ನೇರವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ಆತನ ಒಸಡು ಹಾಗೂ ಸಲೈವಾ ಪರೀಕ್ಷೆ ಮಾಡಬೇಕಾಗುತ್ತದೆ. ಹಾಗಾಗಿ ವೈದ್ಯರು ಕಡ್ಡಾಯ ಪಿಪಿಇ ಕಿಟ್‌ ಹಾಕಿಕೊಂಡಿರಲೇಬೇಕು. ಜೊತೆಗೆ ರೋಗಿಗೆ ಚಿಕಿತ್ಸೆ ನೀಡಿದ ನಂತರ ಕೊಠಡಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಬೇಕು.

3) ಚರ್ಮರೋಗ ವಿಭಾಗದ ವೈದ್ಯರೇ ಕೋವಿಡ್ ಸಂದರ್ಭದಲ್ಲಿ ಬಹಳ ಸುರಕ್ಷಿತವಾಗಿರುವವರು ಎನ್ನಬಹುದು. ಏಕೆಂದರೆ
ರೋಗಿಯ ಚರ್ಮದ ಫೋಟೋ ಇದ್ದರೆ ಸಾಕು ಒಂದು ಹಂತದಲ್ಲಿ ಚಿಕಿತ್ಸೆ ನೀಡಬಹುದು. ಹೀಗಾಗಿ, ಆದಷ್ಟು ಚರ್ಮರೋಗ ತಜ್ಞರು ಟೆಲಿಮೆಡಿಸಿನ್‌ ಮುಖಾಂತರ ರೋಗಿಯ ಪರಿಶೀಲನೆ ಮಾಡಿದರೆ ಒಳ್ಳೆಯದು. ನೇರವಾಗಿಯೇ ನೋಡಬೇಕಾದ ಸಂದರ್ಭದಲ್ಲಿ ರೋಗಿಯಿಂದ ಅಂತರ ಕಾಯ್ದುಕೊಳ್ಳುವುದು, ಪಿಪಿಇ ಕಿಟ್‌ ಬಳಕೆ ಅಗತ್ಯ.

4)ಕಾರ್ಡಿಯಾಲಜಿ(ಹೃದ್ರೋಗ) ಜನರಲ್‌ ಮಡಿಸಿನ್‌, ಜನರಲ್‌ ಸರ್ಜರಿ, ಕೀಲು-ಮೂಳೆ ರೋಗದ ವಿಭಾಗಗಳಲ್ಲಿ ಸುರಕ್ಷಿತ ಕ್ರಮಗಳನ್ನು ಪಾಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗಿಯ ಪರೀಕ್ಷೆಗೆ ಬಳಸುವ ಉಪಕರಣಗಳನ್ನು ಪ್ರತಿ ಸಂದರ್ಶನದ ನಂತರ ಸ್ಯಾನಿಟೈಸ್‌ ಮಾಡಲೇಬೇಕು.

5)ಆಸ್ಪತ್ರೆಗಳು ಇನ್ಫೆಕ್ಷನ್‌ ಕಂಟ್ರೋಲ್‌ ವಿಭಾಗವನ್ನು ಒಳ ರೋಗ ವಿಭಾಗದಲ್ಲಿ ಹೆಚ್ಚು ಬಳಸಿಕೊಳ್ಳಬೇಕು. ರೋಗಿಯ ಹಾಸಿಗೆಯಿಂದ ಹಿಡಿದು, ಆತ ಬಳಸುವ ಶೌಚಾಲಯದವರೆಗೂ ಸೋಂಕು ತಡೆ ನಿಯಂತ್ರಣಾ ಕ್ರಮಗಳನ್ನು ಪರಿಪಾಲಿಸಬೇಕು. ಶಸ್ತ್ರಚಿಕಿತ್ಸೆಗೆ ರೋಗಿಯನ್ನು ದಾಖಲಿಸಿಕೊಳ್ಳುವ ಮುನ್ನ ಇದುವರೆಗೆ ಹೆಚ್‌ಐವಿ, ಹೆಪಟೈಟಿಸ್‌ ಪರೀಕ್ಷೆ ಮಾಡುತ್ತಿದ್ದೆವು. ಈಗ ಕೋವಿಡನ್ನೂ ಕಡ್ಡಾಯವಾಗಿ ಸರ್ಜರಿ ಪೂರ್ವ ಪರೀಕ್ಷೆಯಲ್ಲಿ ಸೇರಿಸಿಕೊಳ್ಳಬೇಕು.

6)ಕೋವಿಡ್ ಪರೀಕ್ಷೆಗಾಗಿ ರ‍್ಯಾಪಿಡ್‌ ಟೆಸ್ಟ್ ಕಿಟ್ ಗಳನ್ನು ಸರ್ಕಾರ ಉಚಿತವಾಗಿ ಕೊಡಬಹುದು. ಅಥವಾ ರೋಗಿಗಳಿಂದಲೇ
ಪಡೆಯಿರಿ ಎನ್ನಬಹುದು. ನಿರ್ದೇಶಿತ ಮಾನದಂಡಗಳು ಬಂದಾಗ ಅವುಗಳನ್ನು ತಕ್ಷಣವೇ ಅಳವಡಿಸಿಕೊಳ್ಳಬೇಕು. ಕೋವಿಡ್ ಪರೀಕ್ಷೆ ಪ್ರತಿ ರೋಗಿಗೂ ಕಡ್ಡಾಯವಾದರೆ ಅದರಿಂದ ರೋಗಿ ಹಾಗೂ ವೈದ್ಯ ಇಬ್ಬರಿಗೂ ಒಳಿತೇ ಆಗುತ್ತದೆ.

7) ರೇಡಿಯಾಲಜಿಯಲ್ಲಿ ಬಳಸುವ ಉಪಕರಣಗಳಿಗೆ ತೆಳು ಪರದೆಯ ಪ್ಲಾಸ್ಟಿಕ್‌ ಕವರ್‌ಗಳನ್ನು ಬಳಸುವುದು ಒಳ್ಳೆಯದು.
ಜೊತೆಗೆ ಸಿ.ಟಿ. ಸ್ಕ್ಯಾನಿಂಗ್‌ ಮಾಡುವಾಗ ರೋಗಿ ಹಾಗೂ ಪರೀಕ್ಷಕನ ನಡುವೆ ಅಂತರ ಕಾಪಾಡಿಕೊಳ್ಳಲು ಪಿಪಿಇ ಕಿಟ್‌ ಬಳಸಿಕೊಳ್ಳಬೇಕು ಹಾಗೂ ಸ್ಕ್ಯಾನಿಂಗ್‌ ಯಂತ್ರಗಳಿಗೂ ಒಮ್ಮೆ ಮಾತ್ರ ಬಳಸಬಹುದಾದ ತೆಳು ಪ್ಲಾಸ್ಟಿಕ್‌ ಪರದೆಗಳನ್ನು ಉಪಯೋಗಿಸುವುದು ಸೂಕ್ತ.

8)ರಕ್ತ ನಿಧಿಗಳಲ್ಲಿ ಕೂಡ ಅಂತರದ ಬಗ್ಗೆ ಗಮನ ಕೊಡಬೇಕು. ರಕ್ತವನ್ನು ಶುದ್ಧೀಕರಿಸಿ ಶೇಖರಿಸುವಾಗಲೂ ವೈಯಕ್ತಿಕ ಸ್ವತ್ಛತೆ
ಹಾಗೂ ಕೊಠಡಿಯ ಸ್ವತ್ಛತೆಯ ಬಗ್ಗೆ ಗಮನ ಕೊಡಬೇಕು.

9)ಐಸೋಲೇಷನ್‌ ರೂಂಗಳನ್ನು ಸಿದ್ಧಪಡಿಸಿಕೊಳ್ಳಬೇಕು. ನೆಗೆಟಿವ್‌ ಏರ್‌ ಪ್ರಶರ್‌ ರೂಂ ಆಗಿ ಬದಲಿಸಬೇಕು, ಜೊತೆಗೆ ಐಸೋಲೇಷನ್‌ ರೂಂ ಹೊರಗೆ ಆಂಟೆ ಚೇಂಬರ್‌(ಸುರಕ್ಷಾ ಸಾಧನಗಳನ್ನು ಧರಿಸಲು ಬೇಕಾದ ಚಿಕ್ಕ ಕೊಠಡಿ) ನಿರ್ಮಿಸುವುದು ಸೂಕ್ತ.

10) ವೈದ್ಯರು ದೈಹಿಕವಾಗಿಯಷ್ಟೇ ಅಲ್ಲದೇ, ಮಾನಸಿಕವಾಗಿ ಆರೋಗ್ಯವಂತರಾಗಿರುವುದು ಅಗತ್ಯ. ಹಾಗಾಗಿ ವೈದ್ಯರು
ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ಅಗತ್ಯ ತರಬೇತಿ ಕೂಡ ಪಡೆದುಕೊಳ್ಳಬೇಕು.
ಕೋವಿಡ್ ಸಮಯದಲ್ಲಿ ಇಡೀ ಮಾನವಕುಲ ವನ್ನು ಕಾಪಾಡುತ್ತಿರುವ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳೂ ವರದಿಯಾಗುತ್ತಿವೆ ಎನ್ನುವುದು ಆತಂಕದ ಸಂಗತಿ. ರೋಗಿಗಳೂ ಹಾಗೂ ಅವರ ಕುಟುಂಬದವರು ವೈದ್ಯರ ಇತಿಮಿತಿಗಳನ್ನು ಅರಿತು ಸಹಕರಿಸಲಿ.
ಜನರು ತನ್ನನ್ನು ದೇವರೆಂಬಂತೆ ಕಾಣಬೇಕು ಎನ್ನುವುದನ್ನು ವೈದ್ಯರು ಬಯಸುವುದಿಲ್ಲ. ಅವರಿಗೆ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಯ ಕಣ್ಣಿನಲ್ಲಿ ಕಾಣುವ ಖುಷಿ ಸಾಕಷ್ಟೆ.
(ಲೇಖಕರು ತುಮಕೂರಿನ ಸಿದ್ದಗಂಗಾ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು)

– ಡಾ.ಎಸ್‌.ಪರಮೇಶ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.