ಅನಧಿಕೃತ ಸಿಗಡಿ ಕೃಷಿಗೆ ಕಡಿವಾಣ ಹಾಕಿ
Team Udayavani, Jan 26, 2021, 5:02 PM IST
ಕುಮಟಾ: ತಾಲೂಕಿನ ಕಲಭಾಗ ಹಳ್ಳದಂಚಿನಲ್ಲಿ ನಡೆಸುತ್ತಿರುವ ಅನಧಿಕೃತ ಸಿಗಡಿ ಕೃಷಿಯಿಂದ ಹಂದಿಗೋಣ, ಆಳ್ವೆàಕೋಡಿ, ದೇವಗುಂಡಿ ಹಾಗೂ ಹಂತಿಮಠ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿನ ಕೃಷಿ ಭೂಮಿ ಹಾಗೂ ಕುಡಿಯುವ ನೀರಿನ ಬಾವಿಗೂ ಉಪ್ಪು ನುಗ್ಗುತ್ತಿದ್ದು, ಕೂಡಲೇ ಅನಧಿಕೃತವಾಗಿ ನಡೆಸುತ್ತಿರುವ ಸಿಗಡಿ ಕೃಷಿ ಸ್ಥಗಿತಗೊಳಿಸಿ, ಉಪ್ಪು ನೀರು ಕೃಷಿ ಭೂಮಿಗಳಿಗೆ ನುಗ್ಗದಂತೆ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಸ್ಥಳೀಯರು ಸೋಮವಾರ ಕಲಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಗಜು ನಾಯ್ಕ ಆಳ್ವೆಕೋಡಿ ಮಾತನಾಡಿ, ಸ್ಥಳೀಯ ಗಣಪತಿ ಭಟ್ಟರ ಜಮೀನಿನಲ್ಲಿ ಬೇರೊಬ್ಬರು ಅತಿಕ್ರಮಿಸಿ ಅನಧಿಕೃತವಾಗಿ ಸಿಗಡಿ ಕೃಷಿ ಮಾಡುತ್ತಿರುವುದರಿಂದ ಈ ಸ್ಥಿತಿ ಉದ್ಭವಗೊಂಡಿದೆ. ಈ ಹಿಂದೆ ಕಲಭಾಗ ಹಳ್ಳದಿಂದ ಉಪ್ಪು ನೀರು ರೈತರ ಗದ್ದೆಗೆ ನುಗ್ಗದಂತೆ ಚಿಕ್ಕ ನೀರಾವರಿ ಇಲಾಖೆ ಜಂತ್ರಡಿಗಳನ್ನು ನಿರ್ಮಿಸಿತ್ತು. ಆದರೆ ಅನಧಿಕೃತ ಸಿಗಡಿ ಕೃಷಿ ನಡೆಸುತ್ತಿರುವುದರಿಂದ ಹಳ್ಳದಿಂದ ಉಪ್ಪು ನೀರು ಒಳಸೇರಿ ಕುಡಿಯುವ ನೀರಿಗೂ ಪರದಾಡುವಂತಾಗಿದೆ.
ಇದನ್ನೂ ಓದಿ:ಗಂಗಾವತಿಯಲ್ಲಿ ಟ್ರಾಕ್ಟರ್ ರಾಲಿಗೆ ಪೊಲೀಸರ ತಡೆ: ರಸ್ತೆಯಲ್ಲಿ ಪ್ರತಿಭಟನೆ
ಅನಧಿಕೃತ ಸಿಗಡಿ ಕೃಷಿ ಮಾಡುತ್ತಿರುವವರಿಗೆ ಮೀನುಗಾರಿಕೆ ಇಲಾಖೆಯಿಂದಲೂ ನೋಟಿಸ್ ನೀಡಲಾಗಿದೆ. ಆದರೆ ಯಾವುದೂ ಪ್ರಯೋಜನ ಕಂಡಿಲ್ಲ. ಇಲಾಖೆಯೂ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಬಗ್ಗೆ ಊರಿನ ಜನ ಸಭೆ ಸೇರಿ ಚರ್ಚಿಸಿದ್ದು, ನ್ಯಾಯಕ್ಕಾಗಿ ಹೋರಾಡಿದರೆ ನಮ್ಮ ಮೇಲೆ ಪೊಲೀಸ್ ದೂರು ನೀಡುತ್ತಿದ್ದಾರೆ. ಇಲ್ಲಿನ ರೈತರ ಜಮೀನು ಹಾಳಾಗಿ ಹದಿನೈದು ವರ್ಷವಾಯಿತು. ಅಲ್ಲದೇ, ಉಪ್ಪು ನೀರಿನ ಸಮಸ್ಯೆಯಿಂದ ರೈತರಿಗೆ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಹೊಸ ನಿಯಮಾವಳಿಗಳನ್ನು ಹೊರಡಿಸಿದರೆ ರೈತರ ಭೂಮಿ
ಕೈತಪ್ಪಿ ಹೋಗುವ ಸಾಧ್ಯತೆಯಿದೆ. ಹೀಗಾದರೆ ರೈತರ ಗತಿಯೇನು. ನಮ್ಮ ಹೋರಾಟಕ್ಕೆ ಜನಪ್ರತಿನಿಧಿಗಳು ಕೈಜೋಡಿಸಿ ನ್ಯಾಯ ಕೊಡಿಸಬೇಕು. ಅಲ್ಲದೇ, ಅನಧಿಕೃತ ಸಿಗಡಿ ಕೃಷಿ ನಡೆಸುವುದನ್ನು ಕೂಡಲೇ ಸ್ಥಗಿತಗೊಳಿಸಿ, ಉಪ್ಪು ನೀರು ಸಿಹಿ ನೀರಿನ ಮೂಲಗಳಿಗೆ ನುಗ್ಗದಂತೆ ನೊಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಾಗದ ಮಾಲೀಕ ಗಣಪತಿ ನಾರಾಯಣ ಭಟ್ಟ ಮಾತನಾಡಿ, ಉಪ್ಪು ನೀರು ಒಳನುಗುವ ಜಾಗವು ನನ್ನ ಹಾಗೂ ಶರಾವತಿ ಶಿವ ಭಟ್ಟ ಎಂಬುವವರ ಹೆಸರಿನಲ್ಲಿದೆ. ಆದರೆ ನಮ್ಮ ಜಾಗದಲ್ಲಿ ಬೇರೊಬ್ಬರು ಅನಧಿಕೃತವಾಗಿ ಸಿಗಡಿ ಕೃಷಿ ಮಾಡುತ್ತಿದ್ದು, ಇದರಿಂದ ಸದ್ಯ ಊರಿನಲ್ಲಿ ಎಲ್ಲರ ಮನೆ ಬಾವಿಯ ನೀರು ಹಾಳಾಗಿದೆ. ಗದ್ದೆಯಲ್ಲಿ ಬೇಸಾಯ ಮಾಡಲಾಗುತ್ತಿಲ್ಲ. ಉಪ್ಪು ನೀರು ನುಗುವ ಜಾಗ ನಮ್ಮ ಮಾಲೀಕತ್ವದಲ್ಲಿರುವುದರಿಂದ ಊರಿನ ಜನ ನಮ್ಮನ್ನು ಕೇಳುತ್ತಿದ್ದಾರೆ. ಸಂಬಂಧಪಟ್ಟವರು ಶೀಘ್ರದಲ್ಲೇ
ಸೂಕ್ತ ಕ್ರಮ ಕೈಗೊಂಡು, ಅನಧಿಕೃತವಾಗಿ ಸಿಗಡಿ ಕೃಷಿ ನಡೆಸುವುದನ್ನು ನಿಲ್ಲಿಸಿ, ಉಪ್ಪು ನೀರು ನುಗ್ಗದಂತೆ ಕ್ರಮವಹಿಸಬೇಕು ಎಂದರು. ಲಕ್ಷ್ಮೀನಾರಾಯಣ ಭಟ್ಟ, ಸಂದೀಪ ನಾಯ್ಕ, ದಾಮೋದರ ನಾಯ್ಕ, ವಿನೋದ ನಾಯ್ಕ, ಪರಮೇಶ್ವರ ಪಟಗಾರ, ವಿಷ್ಣು ಇದ್ದರು.